ಕಲಬುರಗಿ: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ಹಲವು ಮನೆಗಳಿಗೆ ಹಾನಿಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಜಿಲ್ಲೆಯಲ್ಲಿಂದು ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ, ಸಮಸ್ಯೆ ಆಲಿಸಿ ಚೆಕ್ ವಿತರಿಸಿದರು. ಜಿಲ್ಲೆಯಲ್ಲಿ 147 ಮನೆಗಳು ವರುಣನ ಅರ್ಭಟಕ್ಕೆ ಹಾನಿಗೊಳಗಾಗಿವೆ. ಕೆಲವು ಶಿಥಿಲಗೊಂಡ ಮನೆಗಳು ನೆಲಕ್ಕುರುಳಿದ್ರೆ, ಹಲವು ಮನೆಗಳ ಗೋಡೆ ಭಾಗಗಳು ಕುಸಿತಗೊಂಡು ಜನರು ತೊಂದರೆಯಲ್ಲಿದ್ದಾರೆ.
ಇಂದು ಜಿಲ್ಲಾ ಪ್ರವಾಸದಲ್ಲಿರುವ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಅಫಜಲಪುರ ತಾಲೂಕಿನ ಹಲವೆಡೆ ಹಾನಿಗೊಳಗಾದ ಸ್ಥಳಗಳನ್ನು ವೀಕ್ಷಣೆ ಮಾಡಿದರು. ಅತಿವೃಷ್ಟಿಯಿಂದ ಮಾತೋಳ್ಳಿ ಗ್ರಾಮದಲ್ಲಿ ಎರಡು ಮನೆಗಳಿಗೆ ಹಾನಿಯಾಗಿದೆ. ಹಾನಿಗೀಡಾದ ಮನೆಗಳ ವೀಕ್ಷಣೆ ಮಾಡಿದ ಸಚಿವ ಮುರುಗೇಶ್ ನಿರಾಣಿ, ತಲಾ 10 ಸಾವಿರದಂತೆ ಎರಡು ಮನೆಗಳ ಕುಟುಂಬಸ್ಥರಿಗೆ ಪರಿಹಾರದ ಚೆಕ್ ವಿತರಿಸಿದರು.
ಇದೇ ವೇಳೆ ಸೊನ್ನ ಬ್ಯಾರೇಜ್‌ಗೆ ಭೇಟಿ ನೀಡಿದ ಸಚಿವರು ಇಂದಿನ ಸ್ಥಿತಿಗತಿ ವೀಕ್ಷಿಸಿದರು. ಸರ್ಕಾರಿ ಶಾಲೆಗಳಿಗೂ ಭೇಟಿ ನೀಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಸರ್ಕಾರ ಈಗಾಗಲೇ 5 ಸಾವಿರ ಸರ್ಕಾರಿ ಶಾಲೆಗಳ ದುರಸ್ತಿಗೆ ಮುಂದಾಗಿದೆ. ಕಲಬುರಗಿ ಜಿಲ್ಲಾ ಮಟ್ಟದಲ್ಲಿ ಇರುವ ಹಣ ಹಾಗೂ ಎಚ್‌ಕೆಆರ್‌ಡಿಬಿಯಿಂದ ಒಂದಿಷ್ಟು ಹಣ ಬಳಸಿಕೊಂಡು ಅಗತ್ಯವಿರುವ ಶಾಲೆಗಳ ದುರಸ್ತಿಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಇದನ್ನೂ ಓದಿ: ಮುಳುಗಡೆಯತ್ತ ಗಂಗಾವತಿ-ಕಂಪ್ಲಿ ಸೇತುವೆ: ಜನ, ವಾಹನ ಸಂಚಾರ ನಿಷೇಧ