ಕಲಬುರಗಿ : ಜಿಲ್ಲೆಯ ನದಿ ಪಾತ್ರದ ಜನರಿಗೆ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಜುಲೈ 15ರವರೆಗೆ ಕಲಬುರಗಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದ ಬಾರಿ ಪ್ರವಾಹಕ್ಕೆ ಸಿಲುಕಿ ನಷ್ಟ ಅನುಭವಿಸಿ ಈಗಷ್ಟೇ ಸುಧಾರಿಸಿಕೊಳ್ಳುತ್ತಿರುವ ರೈತರಿಗೆ ಹಾಗೂ ನದಿ ಪಾತ್ರದ ಜನರಿಗೆ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಭೀಮಾ ನದಿ, ಸನ್ನತಿ ಬ್ರಿಡ್ಜ್ ಕಂ ಬ್ಯಾರೇಜ್, ಬೆಣ್ಣೆತೋರಾ ಜಲಾಶಯ, ಮುಲ್ಲಾಮಾರಿ ಜಲಾಶಯಗಳಲ್ಲಿ ಹಾಗೂ ಜಿಲ್ಲೆಯ ಜೇವರ್ಗಿ ತಾಲೂಕು, ಅಫಜಲಪುರ, ಕಮಲಾಪುರ, ಚಿಂಚೋಳಿ ಹಾಗೂ ಚಿತ್ತಾಪುರ ತಾಲೂಕಿನಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಗಳಿವೆ. ಈಗಾಗಲೇ ಜಲಾಶಯ ಮತ್ತು ಬ್ರಿಡ್ಜ್ ಕಮ್ ಬ್ಯಾರೇಜ್‌ಗಳಿಂದ ನೀರು ಬಿಡುವ ಮುನ್ಸೂಚನೆ ಕೂಡ ನೀಡಲಾಗಿದೆ.
ಪ್ರವಾಹದ ಹಿನ್ನೆಲೆ ಹೈ ಅಲರ್ಟ್ ಘೋಷಣೆ : ಪ್ರವಾಹ ಪರಿಸ್ಥಿತಿ ಹಿನ್ನೆಲೆ ಎಚ್ಚರಿಕೆಯಿಂದರಲು ಕಲಬುರಗಿ ಜಿಲ್ಲಾಡಳಿತ ಸೂಚನೆಯನ್ನು ನೀಡಿದೆ. ಜಿಲ್ಲೆಯಲ್ಲಿ ಭಾರೀ ಮಳೆ ಉಂಟಾಗುವ ಸಂಭವ ಹಿನ್ನೆಲೆ ಜುಲೈ 8 ರಿಂದ 15ರವರೆಗೆ ಜಿಲ್ಲಾಧಿಕಾರಿ ವಿ ವಿ ಜ್ಯೋತ್ಸ್ನಾ ಅವರು ಜಿಲ್ಲೆಯಾದ್ಯಂತ ಹೈಅಲರ್ಟ್ ಘೋಷಿಸಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಮಳೆ ಸುರಿಯುತ್ತಿದ್ದು, ಗ್ರಾಮೀಣ ಭಾಗದ ನದಿ ಪಾತ್ರದ ಹಳ್ಳಿಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇರುವುದರಿಂದ ಹಳ್ಳಿಗಳಲ್ಲಿ ಟಾಸ್ಕ್ ಪೋರ್ಸ್ ತಂಡಗಳನ್ನು ರಚಿಸಿ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟು ಹೋಗದೆ ಸ್ಥಳದಲ್ಲಿಯೇ ಇದ್ದು ಪರಿಸ್ಥಿತಿಯನ್ನು ಎದುರಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : ಕೋಲಾರದಲ್ಲಿ ವರುಣನ ಆರ್ಭಟ : ಮನೆಗಳಿಗೆ ನೀರು ನುಗ್ಗಿ ಅವಾಂತರ