ಸೇಡಂ: ಸತತ 36 ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆಗೆ ಪಟ್ಟಣದ ಕೆಲ ಬಡಾವಣೆಗಳು ನಡುಗಡ್ಡೆಯಂತಾದರೆ, ತಾಲೂಕಿನ ಪ್ರಮುಖ ನದಿಗಳಾದ ಕಾಗಿಣಾ ಮತ್ತು ಕಮಲಾವತಿ ತುಂಬಿ ಹರಿಯುತ್ತಿವೆ.
ಪಟ್ಟಣದ ಜಿ.ಕೆ. ರಸ್ತೆ, ಭವಾನಿ ನಗರ, ದೊಡ್ಡ ಅಗಸಿ, ಸಣ್ಣ ಅಗಸಿ, ಗಣೇಶ ನಗರ, ಊಡಗಿ ರಸ್ತೆ, ಕೋಡ್ಲಾ ಕ್ರಾಸ್ ಸೇರಿದಂತೆ ಕೆಲವೆಡೆ ಮಳೆಯಿಂದ ನೀರು ಜಮಾವಣೆಯಾಗಿದೆ. ಕೆಲ ನಿವಾಸಿಗಳ ಮನೆ ಮತ್ತು ಅಂಗಡಿಗಳಿಗೆ ನೀರು ನುಗ್ಗಿದ್ದು ಹಾನಿಯುಂಟಾಗಿದೆ.
ಅಲ್ಲದೆ ರೆಡ್ಡಿ ಲೇಔಟ್ ಬಳಿಯಿರುವ ಪೈಪ್ಲೈನ್ ಒಡೆದು ಹೋಗಿದೆ. ಈ ಕುರಿತು ಪುರಸಭೆ ಅಧಿಕಾರಿಗಳು ಗಮನಹರಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ. ಸೇಡಂ ಪಟ್ಟಣದಲ್ಲಿ 88 ಮಿಮೀ, ಆಡಕಿ ವ್ಯಾಪ್ತಿಯಲ್ಲಿ 54 ಮಿಮೀ, ಮುಧೋಳ ವ್ಯಾಪ್ತಿಯಲ್ಲಿ 52 ಮಿಮೀ, ಕೋಡ್ಲಾ ವ್ಯಾಪ್ತಿಯಲ್ಲಿ 60.44 ಮಿಮೀ, ಕೋಲಕುಂದಾ ವ್ಯಾಪ್ತಿಯಲ್ಲಿ 45.5 ಮಿಮೀ ಮಳೆಯಾಗಿದೆ.