ಕಲಬುರಗಿ: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಚಿಂಚೋಳಿಯ ಹತ್ತಾರು ಗ್ರಾಮಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಜನ ಸಂಕಷ್ಟ ಎದುರಿಸುತ್ತಿದ್ದಾರೆ.
ಕೆರಳ್ಳಿ, ಬೆನಕನಲ್ಲಿ, ಭಂಟನಲ್ಲಿ ಗ್ರಾಮಗಳಲ್ಲಿ ಸುಮಾರು 500ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಜನರು ರಾತ್ರಿಯೆಲ್ಲಾ ಜಾಗರಣೆ ಮಾಡಿದ್ದಾರೆ. ಬೆಳಗ್ಗೆಯಿಂದ ಮಳೆ ನೀರು ಹೊರ ಹಾಕುವುದೇ ಕೆಲಸವಾಗಿದೆ. ಮನೆಯಲ್ಲಿನ ದಿನಸಿ ಸೇರಿದಂತೆ ಎಲ್ಲಾ ವಸ್ತುಗಳು ನೀರುಪಾಲಾಗಿವೆ.
ಇತ್ತ ಮಹಾರಾಷ್ಟ್ರದಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಹರಿಬಿಡಲಾಗಿದೆ. ಸೊನ್ನ ಬ್ಯಾರೇಜ್ನಿಂದ ಒಂದು ಲಕ್ಷ ಕ್ಯೂಸೆಕ್ಗೂ ಅಧಿಕ ನೀರು ಹೊರಬಿಡುತ್ತಿದ್ದು, ಅಫಜಲಪುರ, ಜೇವರ್ಗಿ, ಚಿತ್ತಾಪುರ ತಾಲೂಕಿನಲ್ಲಿ ಪ್ರವಾಹವುಂಟಾಗಿದೆ. ರೈತರ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಸಂಪೂರ್ಣ ಹಾನಿಯಾಗಿದೆ.
ಕಮಲಾಪುರ ತಾಲೂಕಿನ ಶ್ರೀಚಂದ ಗ್ರಾಮದ ಬಳಿ ತುಂಬಿ ಹರಿಯುತ್ತಿದ್ದ ಹಳ್ಳದ ಸೇತುವೆ ಮೇಲೆ ನೀರಿನ ಸೆಳೆತಕ್ಕೆ ಯುವಕ ಬೈಕ್ ಸಮೇತ ಕೊಚ್ಚಿಕೊಂಡು ಹೋಗಿದ್ದ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಇಂದು ಯುವಕ ಬೀರಶೆಟ್ಟಿ ಬೋಧನವಾದಿ (28) ಶವಾವಗಿ ಪತ್ತೆಯಾಗಿದ್ದಾನೆ. ಮೊನ್ನೆಯಷ್ಟೇ ಆಳಂದ ತಾಲೂಕಿನ ಬೊಮ್ನಳ್ಳಿ ಹಳ್ಳದಲ್ಲಿ ಜೆಸ್ಕಾಂ ಎಇಇ ಕೊಚ್ಚಿ ಹೋಗಿ ಶವವಾಗಿ ಪತ್ತೆಯಾಗಿದ್ದರು.