ಕಲಬುರಗಿ: ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 2013-14ನೇ ಸಾಲಿನಿಂದ 2017-18ನೇ ಸಾಲಿನವರೆಗೆ ಅನುಮೋದನೆ ನೀಡಿರುವ ಎಲ್ಲಾ ಕಾಮಗಾರಿಗಳನ್ನು ಬರುವ ಜೂನ್-2019ರ ಅಂತ್ಯದವರೆಗೆ ಪೂರ್ಣಗೊಳಿಸುವಂತೆ ಅನುಷ್ಠಾನ ಏಜೆನ್ಸಿಗಳಿಗೆ ಮಂಡಳಿಯ ಕಾರ್ಯದರ್ಶಿ ಸುಬೋಧ್ ಯಾದವ್ ಗಡುವು ನೀಡಿದ್ದಾರೆ.
ಜಿಲ್ಲೆಯ ಪ್ರಾದೇಶಿಕ ಆಯುಕ್ತರ ಸಭಾಂಗಣದಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ಕಲಬುರಗಿ, ಬೀದರ, ಯಾದಗಿರಿ, ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಮಂಡಳಿಯ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿರುವ ವಿವಿಧ ಅನುಷ್ಠಾನ ಏಜೆನ್ಸಿ ಅಧಿಕಾರಿಗಳ ಸಭೆ ನಡೆಸಿದ ಅವರು, ಯಾವುದೇ ಕಾರಣಕ್ಕೂ ನಿಧಾನಗತಿ ಪ್ರಗತಿ ಸಹಿಸುವುದಿಲ್ಲ. 2018-19ನೇ ಸಾಲಿನಲ್ಲಿ ಪ್ರಾಯೋಜನೆ ಮಾಡಿಕೊಂಡಿರುವ ಕಾಮಗಾರಿಗಳಲ್ಲಿ ಪ್ರಗತಿ ಹಂತದಲ್ಲಿರುವ ಎಲ್ಲಾ ಕಾಮಗಾರಿಗಳು ಸಹ ಜೂನ್ ಅಂತ್ಯಕ್ಕೆ ಮುಗಿಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಒಂದೇ ಹಂತದಲ್ಲಿ ಈ ಎಲ್ಲಾ ಕಾಮಗಾರಿಗಳ ಆರ್ಥಿಕ ಲೆಕ್ಕವನ್ನು ಕ್ರಮಬದ್ಧಗೊಳಿಸಲಾಗುವುದು. ಇನ್ಮುಂದೆ ಆಯಾ ಕಾಮಗಾರಿಗಳಿಗೆ ಹಂಚಿಕೆ ಮಾಡಲಾದ ಅನುದಾನವನ್ನು ಅವುಗಳಿಗೆ ಮಾತ್ರ ಬಳಸಬೇಕು. ಇಲ್ಲದಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸುಬೋಧ್ ಯಾದವ್ ಎಚ್ಚರಿಕೆ ನೀಡಿದರು.