ಕಲಬುರಗಿ: ಇಷ್ಟು ದಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತವಾಗಿ ಡಯಾಲಿಸಿಸ್ ಚಿಕಿತ್ಸೆ ಸಿಗುತ್ತಿತ್ತು. ಆದರೆ ಕಳೆದ ಎರಡು ತಿಂಗಳಿಂದ ಡಯಾಲಿಸಿಸ್ ಮಾಡಿಸಿಕೊಳ್ಳಲು ರೋಗಿಗಳು ಪರದಾಡುತ್ತಿದ್ದಾರೆ.
ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳು ತಮ್ಮ ಜೀವಿತಾವಧಿವರೆಗೆ ಡಯಾಲಿಸಿಸ್ (ರಕ್ತ ಶುದ್ಧೀಕರಣ) ಮಾಡಿಸಿಕೊಳ್ಳಬೇಕು. ವಾರಕ್ಕೆ ಕನಿಷ್ಠ ಎರಡು ಬಾರಿಯಾದರೂ ಈ ಚಿಕಿತ್ಸೆ ಪಡೆಯಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಬಾರಿ ರಕ್ತ ಶುದ್ಧೀಕರಣಕ್ಕೆ 5 ಸಾವಿರ ರೂಪಾಯಿ ತಗಲುತ್ತದೆ. ಅಂದ್ರೆ ತಿಂಗಳಿಗೆ 40 ಸಾವಿರ ರೂಪಾಯಿ ಖರ್ಚು ಮಾಡಬೇಕು. ಇಷ್ಟೊಂದು ಹಣ ಖರ್ಚು ಮಾಡಲು ಆಗದ ಬಡವರಿಗಾಗಿ ಸರ್ಕಾರ ಮತ್ತು ಬಿಆರ್ ಎಸ್ ಹೆಲ್ತ್ & ರಿಸರ್ಚ್ ಇನ್ಸ್ಟಿಟ್ಯೂಟ್ ಸಹಯೋಗದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಂಪೂರ್ಣವಾಗಿ ಉಚಿತವಾಗಿ ಡಯಾಲಿಸಸ್ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಸರ್ಕಾರ ಬಿಆರ್ ಎಸ್ ಸಂಸ್ಥೆಗೆ ಹಣ ಸಂದಾಯ ಮಾಡಿಲ್ಲವಂತೆ. ಹೀಗಾಗಿ ಡಯಾಲಿಸಿಸ್‌ಗೆ ತಗಲುವ ಕಿಟ್ ಸರಬರಾಜು ಆಗುತ್ತಿಲ್ಲ. ಇದರಿಂದ ಡಯಾಲಿಸಿಸ್ ಮಾಡಲು ಬೇಕಾಗುವ ಡಯಾಲಸರ್, ಟ್ಯೂಬಿಂಗ್, ಎನ್ ಎಸ್, ಇಂಜೆಕ್ಷನ್ ಸೇರಿದಂತೆ ಹಲವು ಡಯಾಲಿಸಿಸ್ ಕಿಟ್ ಗಳನ್ನ ಹೊರಗಡೆಯಿಂದ ಖರೀದಿಸಿ ತರುವ ಸ್ಥಿತಿ ರೋಗಿಗಳಿಗೆ ಬಂದೊದಗಿದೆ.
ಒಂದು ಬಾರಿ ಡಯಾಲಿಸಿಸ್ ಮಾಡಿಸಲು ಕಿಟ್ ಗೆ 1500 ರಿಂದ 2000 ಸಾವಿರ ಹಣ ಖರ್ಚಾಗುತ್ತಿದೆ. ಅಲ್ಲದೆ ವಾರದಲ್ಲಿ ಎರಡು ಬಾರಿ ಡಯಾಲಿಸಿಸ್ ಮಾಡಿಸಬೇಕು. ಹೀಗಾಗಿ ಸರ್ಕಾರಿ ಆಸ್ಪತ್ರೆಯಾದ್ರೂ ತಿಂಗಳಿಗೆ ಸುಮಾರು 15 ರಿಂದ 20 ಸಾವಿರ ಹಣ ಖರ್ಚು ಮಾಡಲೇಬೇಕು. ಜೀವ ಉಳಿಸಿಕೊಳ್ಳಲು ಸಾಲ ಮಾಡಿ ಚಿಕಿತ್ಸೆ ಪಡೆಯುತ್ತಿರುವ ಬಡ ರೋಗಿಗಳ ಗೋಳು ಹೇಳತೀರದ್ದಾಗಿದೆ.
ಜಿಲ್ಲಾಸ್ಪತ್ರೆಯಲ್ಲಿ 82 ಜನ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವವರು ಡಯಾಲಿಸಿಸ್ ಮಾಡಿಸಿಕೊಳ್ಳಲು ನೋಂದಣಿ ಮಾಡಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲರೂ ವಾರಕ್ಕೆ ಎರಡು ಬಾರಿ ಬಂದು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದಾರೆ. ಆದ್ರೆ ಕಳೆದ ಎರಡು ತಿಂಗಳಿನಿಂದ ಡಯಾಲಿಸಿಸ್ ಕಿಟ್ ಸ್ಥಗಿತಗೊಳಿಸಿರೋದ್ರಿಂದ ಬಡ ರೋಗಿಗಳು, ಕುಟುಂಬಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲ ಸಿಗದಿದ್ದರೆ ಜೀವ ಹೋಗುತ್ತೆ ಅಂತಾ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಓದಿ : ಕಲಬುರಗಿ: ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಆ್ಯಂಬುಲೆನ್ಸ್‌ನಲ್ಲೇ ಹೆರಿಗೆ
ಇದು ಜಿಲ್ಲೆಯಲ್ಲಿ ಅಷ್ಟೇ ಅಲ್ಲದೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳಲು ರೋಗಿಗಳು ಇದೇ ರೀತಿ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ, ಸರ್ಕಾರದಿಂದ ಬಿಆರ್ ಎಸ್ ಗೆ ಹಣ ಕೊಡದಿರುವುದಕ್ಕೆ ಈ ರೀತಿ ಸಮಸ್ಯೆ ಆಗಿರಬಹುದು. ಆದ್ರೆ ಬಡ ರೋಗಿಗಳಿಗೆ ತುಂಬಾನೆ ಕಷ್ಟವಾಗುತ್ತಿದೆ ಎಂಬುದನ್ನು ಜಿಲ್ಲಾ ಸರ್ಜನ್ ಡಾ. ಅಂಬಾರಾಯ ರುದ್ರವಾಡಿ ಒಪ್ಪಿಕೊಂಡಿದ್ದಾರೆ.