ಕಲಬುರಗಿ: ಬಿಜೆಪಿಯಲ್ಲಿ ಕಾರ್ಯಕರ್ತರಿಲ್ಲ, ಇರೋ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿದ್ದಾರೆ. ಹಾಗಾಗಿ ರೌಡಿಗಳಿಗೆ ಮಣೆ ಹಾಕುತ್ತಿದ್ದಾರೆ. ಇದು ಬಿಜೆಪಿಯ ಸಂಸ್ಕೃತಿ ಎಂತಹದ್ದು ಅನ್ನೋದನ್ನ ಎತ್ತಿ ತೋರಿಸುತ್ತದೆ ಎಂದು ಕಲಬುರಗಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯವರಿಗೆ ಈಗಾಗಲೇ ಅಧಿಕಾರ ಕಳೆದುಕೊಳ್ಳುವ ಭಯ ಎದುರಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂಬ ಆತಂಕದಲ್ಲಿ ವೋಟ್ಗಳನ್ನ ಕಟ್ ಮಾಡಲು ಮುಂದಾಗಿದೆ. ಇನ್ನೊಂದು ಕಡೆ ಗೂಂಡಾಗಳಿಗೆ ಮಣೆ ಹಾಕ್ತಿದ್ದಾರೆ. ಇದರಿಂದ ಅವರ ಸಂಸ್ಕೃತಿ ಹೊರ ಬರ್ತಿದೆ. ಈ ಬಗ್ಗೆ ಮಾಧ್ಯಮದಲ್ಲಿ ನಿತ್ಯ ತೋರಿಸಲಾಗುತ್ತಿದೆ. ದೇಶದಲ್ಲಿ ಕರ್ನಾಟಕಕ್ಕೆ ಇರುವ ಗೌರವವನ್ನು ಬಿಜೆಪಿ ಹಾಳು ಮಾಡಿದೆ. ಇದೊಂದು ಭ್ರಷ್ಟ ಆಡಳಿತ ಮತ್ತು ಭ್ರಷ್ಟ ಸರ್ಕಾರ ಅನ್ನೋದು ಬಿಜೆಪಿ ಸಾಬೀತು ಮಾಡಿದೆ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಬರುವವರಿಗೆ ಆಹ್ವಾನ ಕೊಟ್ಟಿದ್ದೇನೆ. ಬೇಷರತ್ತಾಗಿ ಪಕ್ಷಕ್ಕೆ ಸೇರಿಕೊಳ್ಳಲು ಹಲವರು ಮುಂದೆ ಬಂದಿದ್ದು, ಅವರ ಬಗ್ಗೆ ಹಿರಿಯ ನಾಯಕರ ಗಮನಕ್ಕೆ ತಂದಿದ್ದೇನೆ. ಯಾರು ಪಕ್ಷಕ್ಕೆ ಬಂದರೆ ಲಾಭ ಆಗಲಿದೆ ಅನ್ನೋ ಲೆಕ್ಕಾಚಾರದ ಮೇಲೆ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಾಂಬೆ ಟೀಂ ಗೆಳೆಯರು ಪಕ್ಷಕ್ಕೆ ಮರಳುವ ಸಾಧ್ಯತೆ ಬಗ್ಗೆ ಸುಳಿವು ನೀಡಿದರು.
ಇದೆ ವೇಳೆ ಸಿದ್ದರಾಮಯ್ಯ ಮತ್ತು ಡಿಕೆಶಿ ಮಧ್ಯೆ ಮೀಡಿಯಾದವರು ಗ್ಯಾಪ್ ತೋರಿಸ್ತಿದ್ದೀರಿ. ನಮ್ಮ ಮಧ್ಯೆ ಅಂತಹ ಯಾವುದೇ ಗ್ಯಾಪ್ ಇಲ್ಲ ಎಂದು ಡಿ ಕೆ ಶಿವಕುಮಾರ್ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಬಿಜೆಪಿ ಸೇರಲು ರೌಡಿಗಳು ಪರೇಡ್ಗೆ ಸಜ್ಜಾಗಿದ್ದಾರೆ: ಸಿಎಂಗೆ ಬಾಂಬೆ ಬೊಮ್ಮಣ್ಣ ಎಂದು ಕಾಂಗ್ರೆಸ್ ಟ್ವೀಟ್ ಅಭಿಯಾನ
ಗಡಿ ವಿವಾದವನ್ನು ರಾಜಕಾರಣ ಮಾಡಬೇಡಿ: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ ರಾತ್ರಿ ರಾಜಕಾರಣ ಮಾಡಬೇಡಿ, ಗಡಿ ವಿವಾದದ ಬಗ್ಗೆ ಸರ್ಕಾರ ರಾಜಕಾರಣ ಮಾಡೋದು ಮೊದಲು ಬಿಡಲಿ. ನಮ್ಮೂರು ನಮ್ಮದು, ಅವರೂರು ಅವರದು, ನಮ್ಮ ಹಳ್ಳಿ ನಮ್ಮದು. ರಾಜಕೀಯ ಲಾಭಕ್ಕಾಗಿ ಒಡೆಯದೆ ಯಥಾಸ್ಥಿತಿ ಕಾಯ್ದುಕೊಳ್ಳಲು ಬಿಡಿ ಎಂದು ಸಲಹೆ ನೀಡಿದರು.