ಕಲಬುರಗಿ : ದೇಶದಲ್ಲಿಯೇ ಕೊರೊನಾಗೆ ಮೊದಲ ಬಲಿಯಾಗಿದ್ದ ಕಲಬುರ್ಗಿ ಜಿಲ್ಲೆಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಸೋಂಕಿತರು ಗುಣಮುಖವಾಗಿ ರಾಜ್ಯದಲ್ಲಿ ಮೊದಲ ಸ್ಥಾನಕ್ಕೆ ಬಂದಿದೆ. ಇಲ್ಲಿನ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳೇ ವರದಾನವಾಗಿದೆ.
ಜಿಲ್ಲೆಯಲ್ಲಿ ಈವರೆಗೆ 60 ಸಾವಿರ ಸ್ಯಾಂಪಲ್ಸ್ ಕಲೆಕ್ಟ್ ಮಾಡಿದ್ದು, ಇದರಲ್ಲಿ ಈವರೆಗೆ 1,436 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇನ್ನೂ 5,700 ಸ್ಯಾಂಪಲ್ಗಳ ವರದಿ ಬರಬೇಕಿದೆ. ಸೋಂಕಿತರ ಸಂಖ್ಯೆ ಒಂದೆಡೆ ಏರಿಕೆಯಾಗುತ್ತಿದ್ರೆ, ಅದಕ್ಕಿಂತ ತೀವ್ರ ಗತಿಯಲ್ಲಿ ಸೋಂಕಿತರು ಗುಣ ಮುಖವಾಗುತ್ತಿದ್ದಾರೆ. ಈವರೆಗೆ 1,095 ಸೋಂಕಿತರು ಗುಣಮುಖರಾಗಿದ್ದಾರೆ. ಅಂದ್ರೆ ಶೇ.76% ಸೊಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಸದ್ಯ ಜಿಲ್ಲೆಯಲ್ಲಿ 323 ರೋಗಿಗಳು ಸಕ್ರಿಯರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ ಕೋವಿಡ್-19 ಸೋಂಕಿಗೆ 18 ಜನ ನಿಧನ ಹೊಂದಿದ್ದು, ಮರಣ ಪ್ರಮಾಣ ಶೇ.1ರಷ್ಟಿದೆ. ಸೋಂಕಿಗೆ ಕೊನೆಯುಸಿರೆಳದ 18 ಜನರಲ್ಲಿ 60 ಮತ್ತು ಮೇಲ್ಪಟ್ಟ ವರ್ಷದ 8 ಜನ ಹಾಗೂ 55 ಮತ್ತು ಮೇಲ್ಪಟ್ಟ ವಯಸ್ಸಿನ 6 ಜನರಿದ್ದಾರೆ. ಮರಣ ಹೊಂದಿದ 18 ಜನರ ಪೈಕಿ ಬಹುತೇಕರು ಮಾರಣಾಂತಿಕ, ದೀರ್ಘಕಾಲದ ಮತ್ತು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದವರು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಕೊರೊನಾಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನದ ಮಧ್ಯೆ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಜಿಲ್ಲೆಯ ಜನರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಜಿಲ್ಲೆ ಎರಡನೇ ಸ್ಥಾನದಲ್ಲಿದ್ದರೆ ಗುಣಮುಖರಾಗುವವರ ಸಂಖ್ಯೆಯಲ್ಲಿ ಪ್ರಥಮ ಸ್ಥಾನದಲ್ಲಿದೆ.
ವೈದ್ಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಹಗಲಿರುಳು ಶ್ರಮಿಸಿದ್ದರ ಫಲ ಈಗ ಕಲಬುರ್ಗಿಯಲ್ಲಿ ಕೊರೊನಾ ಸೋಲಲು ಕಾರಣವಾಗಿದೆ. ಜೊತೆಗೆ ಪಾಸಿಟಿವ್ ಬರುವ ರೋಗಿಗಳಿಗೆ ತಕ್ಷಣ ಅಗತ್ಯ ಚಿಕಿತ್ಸೆ ಹಾಗೂ ಅವರಿಗೆ ಮಾನಸಿಕ ಸ್ತೈರ್ಯ ತುಂಬುವ ಕೆಲಸ ಜಿಲ್ಲಾಡಳಿತ ಮಾಡುತ್ತಿದೆ. ಇದು ಕೂಡಾ ಗುಣಮುಖ ಸಂಖ್ಯೆ ಹೆಚ್ಚಲು ಒಂದು ಕಾರಣವಾಗಿದೆ. ದೇಶದಾದ್ಯಂತ ಮಾರ್ಚ್ 24ಕ್ಕೆ ಲಾಕ್‌ಡೌನ್ ಆಗಿದ್ರೆ, ಕಲಬುರ್ಗಿ ಜಿಲ್ಲಾಡಳಿತ ಮಾರ್ಚ್ 16ಕ್ಕೆ ಲಾಕ್‌ಡೌನ್ ಘೋಷಣೆ ಮಾಡಿ ಜನ ಮನೆಯಿಂದ ಸಾರ್ವಜನಿಕರು ಹೊರಬರದಂತೆ ಮನವಿ ಮಾಡಿತ್ತು. ಇದೇ ರೀತಿ ಜಿಲ್ಲಾಡಳಿತ ಕೊರೊನಾ ವಿರುದ್ಧ ಹೋರಾಡುವಲ್ಲಿ ಸಾರ್ವಜನಿಕರು ಕೂಡ ಕೈ ಜೋಡಿಸಿದ್ರೆ ಕೊರೊನಾ ಸಂಪೂರ್ಣ ನಿರ್ಮೂಲನೆ ಆಗುವುದರಲ್ಲಿ ಎರಡನೇ ಮಾತೆ ಇಲ್ಲ.