ಕಲಬುರಗಿ : ನಗರದಲ್ಲಿ ದಿನದಿಂದ ದಿನಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ ಹೆಚ್ಚುತ್ತಲೇ ಇದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ವ್ಯಾಪಕವಾಗಿ ಹರಡಲು ಇದು ಒಂದು ಪ್ರಮುಖ ಕಾರಣ ಎಂದು ಎನ್ನಲಾಗುತ್ತಿದ್ದು, ಸದ್ಯ ಆರೋಗ್ಯ ಇಲಾಖೆ ನಿರ್ಲಕ್ಷ್ಯ ಎಷ್ಟರಮಟ್ಟಿಗೆ ಇದೇ ಅನ್ನೋದು ಬಟಾಬಯಲಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಸೋಂಕಿತ ವೃದ್ಧೆಯನ್ನು ಮನೆಯಲ್ಲಿ ಬಿಟ್ಟು ಬರುವ ಮೂಲಕ ವಿವಾದಕ್ಕೆ ಕಾರಣವಾದ ಆರೋಗ್ಯ ಇಲಾಖೆ ಸಿಬ್ಬಂದಿ, ಇಂದು ಮತ್ತೊಂದು ಎಡವಟ್ಟು ಮಾಡಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ವ್ಯಕ್ತಿಗೆ ಸೋಂಕು ದೃಢವಾಗಿ ಒಂದು ದಿನವಾದ್ರೂ ಆಸ್ಪತ್ರೆಗೆ ಕರೆದೊಯ್ಯದೆ, ಆಸ್ಪತ್ರೆಗೆ ಬಂದರೂ ಅಡ್ಮಿಟ್ ಮಾಡಿಕೊಳ್ಳದೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ.
ಕೊನೆಗೆ ಸಂಬಂಧಿಕರು ಸೋಂಕಿತನನ್ನೇ ಜಿಮ್ಸ್ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಆಗಲೂ ಸೋಂಕಿತನನ್ನು ಆಸ್ಪತ್ರೆಗೆ ಸೇರಿಸಿಕೊಳ್ಳದೆ ಸಿಬ್ಬಂದಿ ನಿರ್ಲಕ್ಷ್ಯ ತಾಳಿದ್ದಾರೆ. ತನ್ನನ್ನು ಎಲ್ಲಾದ್ರು ದಾಖಲು ಮಾಡಿ ಚಿಕಿತ್ಸೆ ಕೊಡಿ ಎಂದು ಸೋಂಕಿತ ವ್ಯಕ್ತಿ ಮನವಿ ಮಾಡಿಕೊಂಡರೂ ಕನಿಕರ ತೋರದ ಆಸ್ಪತ್ರೆ ಸಿಬ್ಬಂದಿ, ಒಬ್ಬರ ಮೇಲೆ ಮತ್ತೊಬ್ಬರು ಹಾಕಿ ಜಾರಿಕೊಂಡಿದ್ದಾರೆ.
ಆರೋಗ್ಯ ಇಲಾಖೆಯ ವಿರುದ್ಧ ಸೋಂಕಿತನ ಕುಟುಂಬಸ್ಥರ ಆಕ್ರೋಶ
ಆರೋಗ್ಯ ಇಲಾಖೆ ಸಿಬ್ಬಂದಿ ಈ ವರ್ತನೆಗೆ ಸೋಂಕಿತರ ಕುಟುಂಬಸ್ಥರು ಹಾಗೂ ಸಂಬಂಧಿಕರು ಅಸಮಾಧಾನ ವ್ಯಕ್ತಪಡಿಸಿ ಆಕ್ರೋಶ ಹೊರಹಾಕಿದ್ದಾರೆ. ನಾವಾಗಿಯೇ ಕರೆದುಕೊಂಡು ಬಂದಿದ್ದರೂ ಅಡ್ಮಿಟ್ ಮಾಡಿಕೊಳ್ಳುತ್ತಿಲ್ಲ. ಸೂಕ್ತ ಚಿಕಿತ್ಸೆಯನ್ನೂ ನೀಡದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ಸಂಬಂಧಿಕರು ಕಿಡಿಕಾರಿದ್ದಾರೆ.
ನಗರದ ಜಿ ಆರ್ ಕಾಲೋನಿಯ ನಲವತ್ತು ವರ್ಷದ ವ್ಯಕ್ತಿಗೆ ಕೊರೊನಾ ಇರುವುದನ್ನು ಸ್ವತಃ ಆರೋಗ್ಯ ಇಲಾಖೆ ಸಿಬ್ಬಂದಿ ದೃಢಪಡಿಸಿದ್ದರು. ಆತ ಇರುವಲ್ಲಿಗೆ ಹೋಗಿ ಕರೆದುಕೊಂಡು ಬರಬೇಕಾದ ಆರೋಗ್ಯ ಸಿಬ್ಬಂದಿ, ಸ್ವತಃ ಸೋಂಕಿತನೇ ಆಸ್ಪತ್ರೆಗೆ ಬಂದರು ಸೇರಿಸಿಕೊಳ್ಳಲಿಲ್ಲ.
ಸೋಂಕು ಹರಡಿರುವ ಭೀತಿ
ಸದ್ಯ ಕುಟುಂಬಸ್ಥರು ಆತನನ್ನು ಮತ್ತೆ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಆರೋಗ್ಯ ಇಲಾಖೆ ಆಲಸಿತನದಿಂದ ಸೋಂಕಿತ ವ್ಯಕ್ತಿ ಮನೆಯಲ್ಲಿ ಇರುವಂತಾಗಿದ್ದು, ಸದ್ಯ ಸೋಂಕಿತ ಆಸ್ಪತ್ರೆಗೆ ಬಂದು ಹೋಗಿದ್ದರಿಂದ ಯಾರಿಗೆಲ್ಲ ಸೋಂಕು ಹರಡಿದೆ ಎಂಬ ಭೀತಿ ಎದುರಾಗಿದೆ.