ಕಲಬುರಗಿ: ಕೋವಿಡ್ ಆತಂಕದ ನಡುವೆಯೇ ಜಿಲ್ಲೆಯಲ್ಲಿ ಗಣೇಶ ಹಬ್ಬದ ಸಂಭ್ರಮ ಎದ್ದು ಕಾಣುತ್ತಿದೆ. ರಾಜ್ಯ ಸರ್ಕಾರ ಗೌರಿ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಲು ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ದೊಡ್ಡ ಗಾತ್ರದ ಮೂರ್ತಿಗಳ ಬದಲಿಗೆ ಸಣ್ಣ ಗಣೇಶ ಮೂರ್ತಿಗಳದ್ದೇ ದರ್ಬಾರ್ ಜೋರಾಗಿದೆ.
ಸೂಪರ್ ಮಾರುಕಟ್ಟೆಯಲ್ಲಿ ಗಣೇಶ ಮೂರ್ತಿಗಳ ಖರೀದಿ ಜೋರಾಗಿತ್ತು. ನಗರದ ಹಲವೆಡೆ ರಸ್ತೆ ಬದಿಗಳಲ್ಲಿ ಸಹ ಗಣೇಶ ಮೂರ್ತಿಗಳ ಮಾರಾಟ ಮಾಡಲಾಗುತ್ತಿದೆ. ಹೂವು, ಹಣ್ಣು, ತಳಿರು-ತೋರಣಗಳ ಖರೀದಿ ಭರಾಟೆ ಜೋರಾಗಿತ್ತು. ಆಗಾಗ ಮಳೆಯ ಸಿಂಚನವಾಗುತ್ತಿದ್ದು, ಇದರ ನಡುವೆಯೇ ಖರೀದಿಯಲ್ಲಿ ತೊಡಗಿರೋ ಕಲಬುರಗಿ ಜನತೆ. ನಾಳೆಯ ಗಣೇಶ ಚೌತಿಗೆ ಸಿದ್ದತೆ ನಡೆಸಿದ್ದಾರೆ.
ಈ ಬಾರಿ ಸಣ್ಣ ಗಣಪನದ್ದೇ ಕಾರುಬಾರು
ಸರ್ಕಾರ ಗಣೇಶ ಚತುರ್ಥಿಗೆ ಮಾರ್ಗಸೂಚಿ ಹೊರಡಿಸಿದ್ದು, ಸಾರ್ವಜನಿಕ ಸ್ಥಳದಲ್ಲಿ ಕೇವಲ ನಾಲ್ಕು ಅಡಿ ಎತ್ತರದ ಗಣೇಶ ಪ್ರತಿಷ್ಠಾಪನೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಈ ಬಾರಿ ಮಾರ್ಕೆಟ್ನಲ್ಲಿ ಕೂಡ ದೊಡ್ಡ ಗಣಪತಿ ಮಾರಾಟಕ್ಕೆ ಕಂಡುಬರುತ್ತಿಲ್ಲ. ಪುಟ್ಟ ಪುಟ್ಟ ಗಣೇಶನನ್ನು ಮಾತ್ರ ಮಾರುಕಟ್ಟೆಯಲ್ಲಿ ಇಡಲಾಗಿದೆ. ಮಾರ್ಕೆಟ್ಗೆ ಲಗ್ಗೆ ಹಾಕಿರುವ ಸಣ್ಣ ಗಣಪನನ್ನ ಖರೀದಿಸಲು ಜನ ಮುಗಿಬಿದ್ದಿದ್ದಾರೆ.
ಕೊರೊನಾ ಮುಕ್ತಿಗಾಗಿ ಮೋದಕ ಪ್ರಿಯನಲ್ಲಿ ಪ್ರಾರ್ಥನೆ
ಮಾಹಾಮಾರಿ ಕೊರೊನಾ ಜಗತ್ತಿನಾದ್ಯಂತ ತನ್ನ ಕಬಂಧಬಾಹು ಚಾಚಿದ್ದು, ಜನ ಆತಂಕದಲ್ಲೆ ದಿನದೂಡುವ ಪರಿಸ್ಥಿತಿ ಎದುರಾಗಿದೆ. ಆದರಿಂದ ಈ ಬಾರಿ ಸರ್ಕಾರದ ಮಾರ್ಗಸೂಚಿಯಂತೆ ಮುಂಜಾಗ್ರತಾ ಕ್ರಮವಹಿಸಿ ಸರಳವಾಗಿ ಹಬ್ಬವನ್ನು ಆಚರಿಸಿ ಕೊರೊನಾ ಮುಕ್ತಿಗಾಗಿ ಗಣೇಶನಲ್ಲಿ ಪಾರ್ಥನೆ ಮಾಡಲಾಗುವುದು ಭಕ್ತರಾದ ಅಂಬಿಕಾ ತಿಳಿಸಿದ್ದಾರೆ.