ಕಲಬುರಗಿ: ಹಗಲು ಮನೆಗಳ್ಳತನ ಮಾಡುತ್ತಿದ್ದ ಓರ್ವ ಬಾಲಕ ಸೇರಿ ನಾಲ್ವರು ಪಡ್ಡೆ ಹುಡುಗರನ್ನು ಪೊಲೀಸರು ಬಂಧಿಸಿದ್ದಾರೆ. ಮಿಲ್ಲತ್ ನಗರ ನಿವಾಸಿಗಳಾದ ಇಬ್ರಾಹಿಂ ಶೇಖ್ (20) ಸೈಯದ ಶಾಹಿಲ್ ದಸ್ತಗೀರ್ (22), ಮಹಮ್ಮದ್ ಖಾಸಿಂ (22) ಹಾಗೂ ಓರ್ವ ಅಪ್ರಾಪ್ತ ಬಂಧಿತರು.
ಅಂಗಡಿಗಳಲ್ಲಿ ಚಿಕ್ಕಪುಟ್ಟ ಕೆಲಸ ಮಾಡಿಕೊಂಡಿದ್ದ ಇವರು ದುಡಿದ ಹಣ ಮೋಜಿಗೆ ಸಾಕಾಗದಿದ್ದಾಗ ಮನೆಗಳ್ಳತನ ಮೈಗೂಡಿಸಿಕೊಂಡಿದ್ದರಂತೆ. ಮನೆಗಳಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಹಗಲು ಹೊತ್ತಿನಲ್ಲಿಯೇ ತಾವು ವಾಸವಾಗಿರುವ ಮಿಲ್ಲತ್ ನಗರ ಹಾಗೂ ಪಕ್ಕದ ಜುಬೇರ್ ಕಾಲೋನಿಯ ಮನೆಗಳಲ್ಲಿ ದುಷ್ಕೃತ್ಯ ಎಸಗುತ್ತಿದ್ದರು.
ಕಳ್ಳತನದ ದೃಶ್ಯ ಸಿಸಿ ಕ್ಯಾಮರಾಗಳಲ್ಲಿ ಸೆರೆೆಯಾಗಿದ್ದವು. ದೃಶ್ಯದ ಆಧಾರದ ಮೇಲೆ ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿವೆ. ಈ ಕುರಿತು ಸಬ್ ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತರಿಂದ ಅಂದಾಜು ಮೂರುವರೆ ಲಕ್ಷ ಮೌಲ್ಯದ 72 ಗ್ರಾಂ ಚಿನ್ನಾಭರಣ ಹಾಗೂ 190 ಗ್ರಾಂ ಬೆಳ್ಳಿ ಆಭರಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಕಳ್ಳರನ್ನು ಹಿಡಿದು ಜೈಲಿಗಟ್ಟಿದ ಪೊಲೀಸರ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಎನ್. ರವಿಕುಮಾರ್, ಡಿಸಿಪಿ ಆಡೂರು ಶ್ರೀನಿವಾಸಲು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ತೋಟ ಕಾಯಲು ಹೋದಾಗ ದುರಂತ: ತನ್ನದೇ ಬಂದೂಕಿನ ಗುಂಡೇಟಿಗೆ ವ್ಯಕ್ತಿ ಬಲಿ