ಕಲಬುರಗಿ: ಮಳೆ ನೀರಿನಿಂದ ತುಂಬಿ ಹರಿಯುತ್ತಿದ್ದ ಚರಂಡಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಮಾಜಿ ಸೈನಿಕರೊಬ್ಬರನ್ನು ಅಗ್ನಿಶಾಮಕ ಸಿಬ್ಬಂದಿ ಸಮಯ ಪ್ರಜ್ಞೆತೋರಿ ರಕ್ಷಣೆ ಮಾಡಿರುವ ಘಟನೆ ನಗರದ ಲಾಲಗೇರಿ ಕ್ರಾಸ್ ಹತ್ತಿರದ ಮಹಾಲಕ್ಷ್ಮಿ ನಗರದಲ್ಲಿ ನಡೆದಿದೆ.
ಮಲ್ಲಣ್ಣ ಮಡಿವಾಳ ಎಂಬುವರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಕಳೆದ ಎರಡು ದಿನಗಳಿಂದ ನಗರದಲ್ಲಿ ಭಾರಿ ಮಳೆ ಸುರಿಯುತ್ತಿರುವ ಪರಿಣಾಮ ಚರಂಡಿಗಳು ತುಂಬಿ ಹರಿಯುತ್ತಿವೆ. ಈ ವೇಳೆ ಬೈಕ್ ಮೇಲೆ ತೆರಳುತ್ತಿದ್ದ ಮಲ್ಲಣ್ಣ ಆಯತಪ್ಪಿ ಚರಂಡಿಗೆ ಬಿದ್ದಿದ್ದು, ನೀರಿನ ರಭಸಕ್ಕೆ ಚರಂಡಿಯಲ್ಲಿ ಸುಮಾರು 50 ಮೀಟರ್ ದೂರದವರೆಗೆ ಕೊಚ್ಚಿಕೊಂಡು ಹೋಗಿದ್ದಾರೆ.
ಅಗ್ನಿಶಾಮಕ ದಳದ ಕಚೇರಿ ಮುಂದೆಯೇ ಈ ಘಟನೆ ನಡೆದಿದಿದ್ದು, ತಕ್ಷಣಕ್ಕೆ ಕಾರ್ಯಪ್ರವೃತ್ತರಾದ ಎಸ್ಡಿಆರ್ಎಫ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಸುಮಾರು ಒಂದು ಗಂಟೆಗಳ ಕಾಲ ನಿರಂತರ ಪ್ರಯತ್ನದ ಮೂಲಕ ಚರಂಡಿಯಲ್ಲಿ ಹಗ್ಗ ಬಿಟ್ಟು ಮಾಜಿ ಸೈನಿಕನ ರಕ್ಷಣೆ ಮಾಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಭಾರಿ ಮಳೆ ಎಚ್ಚರಿಕೆ: 20 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ