ಕಲಬುರಗಿ: ಗ್ರಾಮ ಪಂಚಾಯಿತಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಕಲಬುರಗಿ ತಹಶೀಲ್ದಾರ್ ಸಂಗಯ್ಯ ಸ್ವಾಮಿ ದೂರಿನ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿದೆ. ಡಿ.2ರಂದು ನಗರದ ರಂಗಮಂದಿರದಲ್ಲಿ ಬಿಜೆಪಿ ಗ್ರಾಮ ಸ್ವರಾಜ್ ಕಾರ್ಯಕ್ರಮ ನಡೆಸಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದತ್ತಾತ್ರೇಯ ಪಾಟೀಲ್ ,ಕೆಕೆಆರ್ ಡಿಬಿ ವ್ಯಾಪ್ತಿಯ ಯಾವ ಗ್ರಾಮ ಪಂಚಾಯಿತಿ ಅವಿರೋಧವಾಗಿ ಆಯ್ಕೆ ಆಗುತ್ತವೋ ಆ ಗ್ರಾಮ ಪಂಚಾಯಿತಿಗಳಿಗೆ ಅಭಿವೃದ್ಧಿಗಾಗಿ 1 ಕೋಟಿ ರೂ. ಅನುದಾನ ನೀಡುವುದಾಗಿ ಹೇಳಿದ್ದರು.
ಈ ಕುರಿತಂತೆ ಕಾಂಗ್ರೆಸ್ ಮುಖಂಡರು ಸಹ ದತ್ತಾತ್ರೇಯ ಪಾಟೀಲ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಇದೀಗ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ದತ್ತಾತ್ರೇಯ ಪಾಟೀಲ್ ವಿರುದ್ಧ ಬ್ರಹ್ಮಪುರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.