ಕಲಬುರಗಿ: ರೈತರು ಬೆಳೆದ ಸಂಪೂರ್ಣ ತೊಗರಿ ಬೇಳೆ ಖರೀದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಆಲ್ ಇಂಡಿಯಾ ಕಿಸಾನ್ ಸಭಾ ನೇತೃತ್ವದಲ್ಲಿ ಸಂಸದ ಉಮೇಶ್ ಜಾಧವ್ ಮನೆ ಎದುರು ಪ್ರತಿಭಟನೆ ನಡೆಸಲಾಯಿತು.
ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಸಂಸದ ಉಮೇಶ್ ಜಾಧವ್ ಮನೆಯವರೆಗೆ ಪಾದಯಾತ್ರೆ ನಡೆಸಿದ ಪ್ರತಿಭಟನಾಕಾರರು, ಸಂಸದ ಉಮೇಶ್ ಜಾಧವ್ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ರಾಜ್ಯದಲ್ಲಿ ರೈತರು ಒಟ್ಟು 11 ಲಕ್ಷ ಟನ್ ತೊಗರಿ ಬೆಳೆಯುವ ನಿರೀಕ್ಷೆಯಲ್ಲಿದ್ದಾರೆ. ಆದ್ರೆ ರಾಜ್ಯ ಸರ್ಕಾರ ಕೇವಲ 10.70 ದಶಲಕ್ಷ ಟನ್ ಉತ್ಪಾದನೆ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಪಿ.ಎಸ್.ಎಸ್ ಯೋಜನೆಯಲ್ಲಿ ಉತ್ಪಾದನೆಯ ಶೇ. 20 ರಷ್ಟು ಮಾತ್ರ ಖರೀದಿಗೆ 2018 ರಲ್ಲಿ ಆದೇಶ ಹೊರಡಿಸಿತ್ತು. ಈಗಾಗಲೇ ಕೇಂದ್ರ ಸರ್ಕಾರ 1.85 ರಷ್ಟು ತೊಗರಿ ಮಾತ್ರ ಖರೀದಿಗೆ ಅನುಮತಿ ನೀಡಿದೆ. ಇದರಿಂದಾಗಿ ರೈತರಿಗೆ ಅನ್ಯಾಯವಾಗುತ್ತಿದ್ದು, ಕನಿಷ್ಠ 5.5 ಕ್ವಿಂಟಲ್ ತೊಗರಿಬೇಳೆ ಖರೀದಿಗೆ ಒಪ್ಪಿಗೆ ನೀಡುವಂತೆ ಹಾಗೂ ಡಾ. ಎಂ.ಎಸ್ ಸ್ವಾಮಿನಾಥನ್ ವರದಿ ಜಾರಿ ಸೇರಿದಂತೆ ರೈತರಿಗೆ ಪ್ರೋತ್ಸಾಹ ಧನ ಹೆಚ್ಚುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ರು.
ಪಟ್ಟು ಬಿಡದ ಪ್ರತಿಭಟನಾಕಾರರು...
ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಂಸದ ಜಾಧವ್ ಮನೆ ಎದುರು ರಸ್ತೆ ಮೇಲೆ ಕುಳಿತು ಪ್ರತಿಭಟನೆ ನಡೆಸಿದ ರೈತರು, ಮನವಿ ಸಲ್ಲಿಸಲು ಮನೆಗೆ ಬರುವುದಾಗಿ ಮುಂಚಿತವಾಗಿ ಸಂಸದರಿಗೆ ತಿಳಿಸಿದ್ದರು. ಆದರೆ ರೈತರ ಮನವಿಗೆ ಸ್ಪಂದಿಸದೆ ಹೊರಟು ಹೋಗಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಸಂಸದ ಜಾಧವ್ ಬಂದು ಮನವಿ ಸ್ವೀಕರಿಸುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದು ರಸ್ತೆ ಮೇಲೆಯೇ ಪ್ರತಿಭಟನೆ ಮುಂದುವರಿಸಿದರು. ಈ ವೇಳೆ ಪ್ರತಿಭಟನಾಕಾರರ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.