ಕಲಬುರಗಿ: ಕರ್ನಾಟಕ ಪ್ರಾಂತ್ಯ ರೈತ ಸಂಘದ ನೇತೃತ್ವದಲ್ಲಿ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಭೂ ಸಮಾವೇಶ ಆಯೋಜಿಸಲಾಗಿತ್ತು. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡರು ಸಸಿಗೆ ನೀರುಣಿಸುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು.
ರೈತ ಭೂಸ್ವಾಧೀನ ಕಾಯ್ದೆ ತಿದ್ದುಪಡಿಯನ್ನು ಕೂಡಲೇ ವಾಪಸ್ ಪಡೆಯುವಂತೆ ಸಮಾವೇಶದಲ್ಲಿ ಒತ್ತಾಯಿಸಲಾಯಿತು. 1964 ಭೂ ಕಂದಾಯ ಕಲಾಂ 109 ರ ಅಡಿಯಲ್ಲಿ ಕೈಗಾರಿಕೆಗಳಿಗೆ ಬೇಕಾಬಿಟ್ಟಿ ಭೂಮಿ ಖರೀದಿಸುವುದನ್ನು ಕೈಬಿಡಬೇಕು ಹಾಗೂ ಈಗಾಗಲೆ ರೈತರಿಂದ ಕೈಗಾರಿಕೆಗಳಿಗೆ ಖರೀದಿಸಿದ ಜಮೀನಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಲಾಯಿತು.
ಮಾಜಿ ಸಚಿವ ಎಸ್.ಕೆ.ಕಾಂತಾ, ಕರ್ನಾಟಕ ಪ್ರಾಂತ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಾಡೆ, ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮ್ಮಶೆಟ್ಟಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಕರ್ನಾಟಕ ಪ್ರಾಂತ್ಯ ರೈತ ಸಂಘದ ಬಸವರಾಜ್, ಗೌರಮ್ಮ ಪಾಟೀಲ್ ಸೇರಿದಂತೆ ಅನೇಕರು ಸಮಾವೇಶದಲ್ಲಿ ಭಾಗಿಯಾಗಿದ್ದರು.