ಕಲಬುರಗಿ: ಜಿಲ್ಲೆಯಲ್ಲಿ ಭೂಗಳ್ಳರ ಹಾವಳಿ ಹೆಚ್ಚಾಗಿದ್ದು, ಪಾಲಿಕೆ ಅಧಿಕಾರಿಗಳು ಅವರ ಬೆನ್ನಿಗೆ ನಿಂತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಕಲಿ ದಾಖಲೆ ಸೃಷ್ಟಿಸಿ ಪಾರ್ಕ್ ಕಬಳಿಕೆಗೆ ಹುನ್ನಾರ ನಡೆದಿದೆ ಎಂದು ಕಲಬುರಗಿ ಉದ್ಯಾನವನ ಉಳಿಸಿ ಹೋರಾಟ ಸಮಿತಿ ಸಂಚಾಲಕರಾದ ಮಹೇಶ್ ರಾಠೋಡ ಹಾಗೂ ಭೀಮಾ ಶಂಕರ ಮಾಡಿಯಾಳ ಆರೋಪಿಸಿದ್ದಾರೆ.
ನಗರದ ಸಾರಡಾ ಲೇಔಟ್ನಲ್ಲಿರುವ ಉದ್ಯಾನವನವನ್ನು ಖಾಸಗಿ ವ್ಯಕ್ತಿಗಳಿಗೆ ಮಾರುವ ಹುನ್ನಾರ ನಡೆದಿದೆ. ಭೂಗಳ್ಳರ ಜೊತೆ ಮಹಾನಗರ ಪಾಲಿಕೆ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೈಕೋರ್ಟ್ ಆದೇಶಕ್ಕಿಲ್ಲ ಕಿಮ್ಮತ್ತು
ಸುಳ್ಳು ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು 2005 ರಲ್ಲಿಯೇ ಕರ್ನಾಟಕ ಹೈಕೋರ್ಟ್ ಅಭಿಪ್ರಾಯ ಪಟ್ಟಿತ್ತು. ಆದರೆ ಅದನ್ನು ಮರೆಮಾಚಿ ಲೇಔಟ್ ಮಾಲೀಕರಿಂದ ಪಾರ್ಕ್ ಸ್ಥಳ ಮಾರಾಟಕ್ಕೆ ಯತ್ನ ನಡೆದಿದೆ. ಸ್ವತಃ ಪಾಲಿಕೆ ಸಿಬ್ಬಂದಿಯಿಂದಲೇ ಪಾರ್ಕ್ನ ತಂತಿ, ಬೇಲಿ ನೆಲಸಮ ಮಾಡಿಸಲಾಗಿದೆ ಎಂದು ಸಾರಡಾ ಲೇಔಟ್ ನಿವಾಸಿಗಳು ಹಾಗೂ ಉದ್ಯಾನವನ ಉಳಿಸಿ ಹೋರಾಟ ಸಮಿತಿಯು ಪಾಲಿಕೆ ವಿರುದ್ಧ ದೂರಿದ್ದಾರೆ.
ಕೂಡಲೇ ಪಾರ್ಕ್ ಅತಿಕ್ರಮಣ ತಡೆಯಬೇಕು. ಪಾರ್ಕ್ ನಲ್ಲಿ ನಿರ್ಮಿಸಲಾಗುತ್ತಿರುವ ದೇವಸ್ಥಾನದ ಕಾಮಗಾರಿ ಕೈಬಿಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಸ್ಥಳೀಯರು ಹಾಗೂ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.