ಕಲಬುರಗಿ: ಆತ ಟ್ರಾನ್ಸ್‌ಪೋರ್ಟ್ ಕಂಪನಿಯೊಂದರಲ್ಲಿ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ. ದೇಶದ ವಿವಿಧೆಡೆ ಗೂಡ್ಸ್ ಲೋಡ್, ಅನ್‌ಲೋಡ್ ಮಾಡಿ ಜೀವನ ಸಾಗಿಸುತ್ತಿದ್ದ. ಅದರಂತೆ ಅದೊಂದು ದಿನ ನೆರೆಯ ಆಂಧ್ರಕ್ಕೆ ತೆರಳಿ ವಾಪಸ್ ಬರುವಾಗ ಕಲಬುರಗಿ ನಗರದಲ್ಲಿ ತಂಗಿದ್ದಾನೆ. ದುರಾದೃಷ್ಟವಶಾತ್ ಇದೇ ವ್ಯಕ್ತಿ ಬೆಳಗಾಗುವುದರೊಳಗೆ ಸ್ಥಳೀಯರಿಂದ ಹಲ್ಲೆಗೊಳಗಾಗಿ ಬರ್ಬರವಾಗಿ ಹತ್ಯೆಯಾಗಿದ್ದಾನೆ.
ಹತ್ಯೆಯಾಗಿರುವ ವ್ಯಕ್ತಿಯ ಹೆಸರು ಸಚಿನ್. ಮೂಲತಃ ಮಹಾರಾಷ್ಟ್ರದ ಹಿಂಗೋಲಿ ಮೂಲದವನಾದ ಈತ ಟ್ರಾನ್ಸ್‌ಪೋರ್ಟ್ ಕಂಪನಿಯೊಂದರಲ್ಲಿ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ. ಅದಕ್ಕಾಗಿ ಆಗಸ್ಟ್ 12 ರಂದು ಮಹಾರಾಷ್ಟ್ರದಿಂದ ನೆರೆಯ ಆಂಧ್ರದ ಕಡಪ ನಗರಕ್ಕೆ ಹೋಗಿ ಗೂಡ್ಸ್ ಅನ್‌ಲೋಡ್ ಮಾಡಿ ಸ್ನೇಹಿತರಾದ ರವಿ ಮತ್ತು ನಾಗೇಶ್ ಜೊತೆ ಮರಳಿ ಹಿಂತಿರುಗುವಾಗ ರಾತ್ರಿಯಾಗಿದ್ದರಿಂದ ಕಲಬುರಗಿ ನಗರದಲ್ಲಿ ಲಾರಿ ಪಾರ್ಕ್ ಮಾಡಿದ್ದಾರೆ. ನಂತರ ಬಿದ್ದಾಪುರ ಕಾಲೋನಿಯಲ್ಲಿ ರಾತ್ರಿ ಹೊತ್ತಲ್ಲಿ ಸಚಿನ್, ರವಿ ಮತ್ತು ನಾಗೇಶ್ ತಿರುಗಾಡಲು ಹೋಗಿದ್ದಾರೆ.
ಸಾರ್ವಜನಿಕರಿಂದ ಮನಬಂದಂತೆ ಥಳಿತ: ಈ ವೇಳೆ ಎರಡು ಮನೆಗೆ ಮೂರು ಜನ ಸೇರಿಕೊಂಡು ಕನ್ನ ಹಾಕಿದ್ದಾರೆ. ನಂತರ ದಾರಿಯಲ್ಲಿ ಹೋಗ್ತಿದ್ದ ಮಹಿಳೆಯೋರ್ವಳ ಚಿನ್ನದ ಸರ ಕಸಿದುಕೊಂಡು ಮೂರು ಜನ ಎಸ್ಕೇಪ್ ಆಗುವಾಗ ಸಾರ್ವಜನಿಕರು ಬೆನ್ನಟ್ಟಿದ್ದಾರೆ. ಈ ವೇಳೆ ಮೂವರ ಪೈಕಿ ಸಚಿನ್ ಜನರ ಕೈಗೆ ಸಿಕ್ಕರೆ ಉಳಿದ ರವಿ ಮತ್ತು ನಾಗೇಶ್ ಪರಾರಿಯಾಗಿದ್ದಾರೆ. ಆಗ ಸಚಿನ್ ಎಂಬಾತನನ್ನು ಸ್ಥಳೀಯರಾದ ವೀರಭದ್ರ ಹಣಗೋಜಿ, ಚಂದ್ರಕಾಂತ್ ರೆಡ್ಡಿ, ದೇವಾನಂದ್ ಹಣಗೋಜಿ, ಶರಣಬಸಪ್ಪ ಚೀಣಮಗೇರಿ ಮತ್ತು ಕೃಷ್ಣಾಜಿ ಸೇರಿಕೊಂಡು ಮನಬಂದಂತೆ ಥಳಿಸಿದ್ದಾರೆ. ಪರಿಣಾಮ ಸಚಿನ್ ಮೃತಪಟ್ಟಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ ಡಾ ವೈ ಎಸ್ ರವಿಕುಮಾರ್ ತಿಳಿಸಿದ್ದಾರೆ.
ಸ್ಥಳೀಯರ ಕೈಯಿಂದ ಎಸ್ಕೇಪ್ ಆದ ಸ್ನೇಹಿತರು: ಸಾಮಾನ್ಯವಾಗಿ ಸಾರ್ವಜನಿಕರೇ ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸುತ್ತಾರೆ. ಆದರೆ, ಕಲಬುರಗಿಯ ಜನ ಮಾತ್ರ ಕಾನೂನು ಕೈಗೆತ್ತಿಕೊಂಡು ಕಳ್ಳತನ ಮಾಡಿದ್ದ ಸಚಿನ್ನನ್ನು ಪೊಲೀಸರಿಗೆ ಒಪ್ಪಿಸುವುದನ್ನು ಬಿಟ್ಟು ತಾವೇ ಶಿಕ್ಷೆ ನೀಡಿ ಕಂಬಿ ಹಿಂದೆ ಹೋಗಿದ್ದಾರೆ. ಇನ್ನು ಕೊಲೆಯಾದ ಸಚಿನ್ ಹಿನ್ನೆಲೆಯ ಬಗ್ಗೆ ಕೂಡ ಸಬ್ ಅರ್ಬನ್ ಠಾಣೆ ಪೊಲೀಸರು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಘಟನೆಯಲ್ಲಿ ಸಚಿನ್ ಸ್ನೇಹಿತರಿಬ್ಬರು ಸ್ಥಳೀಯರ ಕೈಯಿಂದ ಬಚಾವ್ ಆಗಿ ಮಹಾರಾಷ್ಟ್ರಕ್ಕೆ ಎಸ್ಕೇಪ್ ಆಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಆರೋಪಿಗಳ ಬಂಧನ: ಇತ್ತ ಸಬ್ ಅರ್ಬನ್ ಠಾಣೆ ಪೊಲೀಸರು ಸಚಿನ್ನ ಸ್ನೇಹಿತರಾದ ರವಿ ಮತ್ತು ನಾಗೇಶ್‌ನನ್ನು ಬಂಧಿಸಲು ಮಹಾರಾಷ್ಟ್ರಕ್ಕೆ ತೆರಳಿದ್ದಾರೆ. ಇತ್ತ ಕಳ್ಳತನ ಮಾಡಲು ಬಂದಿದ್ದ ಸಚಿನ್ನನ್ನು ಐವರು ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.