ಕಲಬುರಗಿ: ಇಲ್ಲಿನ ಚಿಂಚೋಳಿ ತಾಲೂಕಿನ ಪೆಂಚನಪಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 20ಕ್ಕೂ ಹೆಚ್ಚು ಗ್ರಾಮಸ್ಥರು ಅಸ್ವಸ್ಥರಾಗಿದ್ದಾರೆ.
ಕಳೆದೆರಡು ದಿನಗಳಿಂದ ಗ್ರಾಮದಲ್ಲಿ ವಾಂತಿ ಭೇದಿ ಪ್ರಕರಣಗಳು ಉಲ್ಬಣಗೊಂಡಿವೆ. ಗ್ರಾಮದಲ್ಲಿನ ತೆರೆದ ಬಾವಿ ಹಾಗು ಕೊಳವೆಬಾವಿಯ ನೀರು ಸೇವಿಸಿ ಗ್ರಾಮಸ್ಥರು ಅನಾರೋಗ್ಯಕ್ಕೀಡಾಗಿದ್ದಾರೆ. ಘಟನೆಯಲ್ಲಿ ತೀವ್ರ ಅಸ್ವಸ್ಥಗೊಂಡವರನ್ನು ಚಿಂಚೋಳಿ ತಾಲೂಕ ಆಸ್ಪತ್ರೆ, ಸುಲೇಪೇಟ್ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗು ಕಲಬುರಗಿ ಜಿಲ್ಲಾಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಇಲಾಖೆಯ ವತಿಯಿಂದ ಗ್ರಾಮದಲ್ಲಿ ಪ್ರತಿ ಮನೆಗಳಿಗೆ ಔಷಧಿ ವಿತರಣೆ ಮಾಡಲಾಗುತ್ತಿದ್ದು, ನೀರನ್ನು ಕಾಯಿಸಿ ಕುಡಿಯುಂತೆ ಸೂಚಿಸಲಾಗುತ್ತಿದೆ.
ಗ್ರಾಮದ ಜನರು ಕುಡಿಯಲು ಬಳಕೆ ಮಾಡುತ್ತಿದ್ದ ನೀರಿನ 10 ಮೂಲಗಳ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿದಾಗ 6 ಮೂಲಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿ ಬಂದಿರುವುದಾಗಿ ಸುಲೇಪೇಟ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿಜಯಕುಮಾರ ಜಾಪಟ್ಟಿ ತಿಳಿಸಿದ್ದಾರೆ.
ಇದನ್ನೂ ಓದಿ: ರಾಯಚೂರು: ಕಲುಷಿತ ನೀರು ಸೇವಿಸಿ ಮಹಿಳೆ ಸಾವು, 30ಕ್ಕೂ ಹೆಚ್ಚು ಜನ ಅಸ್ವಸ್ಥ