ಕಲಬುರಗಿ: ಬಸನಾಳ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ನರೇಗಾ ಯೋಜನೆಯಡಿ ನಿರ್ಮಿಸಲಾದ ಗೋಕಟ್ಟಾ ಭರ್ತಿಯಾಗಿದ್ದು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ. ರಾಜಾ ಬಾಗಿನ ಅರ್ಪಿಸಿದರು.
ಈ ವೇಳೆ ಮಾತನಾಡಿದ ಡಾ. ಪಿ. ರಾಜಾ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2018-19ನೇ ಸಾಲಿನಲ್ಲಿ ಸುಮಾರು 7.5 ಲಕ್ಷ ರೂ ವೆಚ್ಚದಲ್ಲಿ ಈ ಗೋಕಟ್ಟಾ ನಿರ್ಮಿಸಲಾಗಿದೆ. ಸ್ಥಳೀಯರಿಗೆ ಗ್ರಾಮದಲ್ಲಿಯೆ ಉದ್ಯೋಗ ನೀಡುವ ಮೂಲಕ ವಲಸೆಯನ್ನು ತಪ್ಪಿಸಲಾಗಿದೆ ಎಂದರು.
![bagina](https://etvbharatimages.akamaized.net/etvbharat/prod-images/kn-klb-02-zpceobhagin-9023578_27072019213118_2707f_1564243278_93.jpg)
ಗೋಕಟ್ಟಾ ನಿರ್ಮಾಣದಿಂದ ಗ್ರಾಮದ ದನಕರುಗಳಿಗೆ ನೀರಿನ ಸಮಸ್ಯೆ ನಿವಾರಣೆಯಾಗಿದ್ದಲ್ಲದೆ ಇತರೆ ಕಾರ್ಯಗಳಿಗೂ ನೀರು ಬಳಸುವಂತಾಗಿದೆ. ಇದಲ್ಲದೆ ಗ್ರಾಮದ ಬಾವಿಗಳು, ಬೋರವೆಲ್ ಮತ್ತು ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚಿಸಲು ಗೋಕಟ್ಟಾ ತುಂಬಾ ಸಹಕಾರಿಯಾಗಿದೆ. ಇಂತಹ ಜಲಸಂಗ್ರಹಣೆ ಯೋಜನೆಗಳನ್ನು ಎಲ್ಲಾ ಗ್ರಾಮ ಪಂಚಾಯಿತಿಯಲ್ಲಿ ಅನುಷ್ಠಾನಗೊಳಿಸಿದ್ದಲ್ಲಿ ಬೇಸಿಗೆ ಸಮಯದಲ್ಲಿ ತಕ್ಕ ಮಟ್ಟಿಗೆ ನೀರಿನ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.