ಕಲಬುರಗಿ: ಕಳೆದ ಒಂದು ತಿಂಗಳಿನಿಂದ ಭೀಮಾ ನದಿಯ ಒಡಲಿನಲ್ಲಿ ಒಂದರ ನಂತರ ಒಂದರಂತೆ ಶವಗಳು ಪತ್ತೆಯಾಗುತ್ತಿವೆ. ಸಹಜವಾಗಿ ಇದು ದುಷ್ಕರ್ಮಿಗಳ ಕೃತ್ಯ ಇರಬಹುದಾ ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಹೌದು, ಕಳೆದೊಂದು ತಿಂಗಳಲ್ಲಿ ಐದಾರು ಅಪರಿಚಿತ ಶವಗಳು ಭೀಮಾ ನದಿಯಲ್ಲಿ ಪತ್ತೆಯಾಗಿವೆ. ವಾರಕ್ಕೆ ಒಂದರಂತೆ ಶವಗಳು ಜೇವರ್ಗಿ ತಾಲೂಕಿನ ಭೀಮಾ ನದಿಯಲ್ಲಿ ಪತ್ತೆಯಾಗುತ್ತಿವೆ.
ಸೆ. 4ರಂದು ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದ ಭೀಮಾ ನದಿಯಲ್ಲಿ ಸುಮಾರು 35 ವರ್ಷದ ವ್ಯಕ್ತಿಯ ಶವ ಕುತ್ತಿಗೆಗೆ ಹಗ್ಗ ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸೆ. 30ರಂದು ಜೇವರ್ಗಿ ತಾಲೂಕಿನ ಮದರಿ ಗ್ರಾಮದ ಭೀಮಾ ನದಿಯಲ್ಲಿ ಸುಮಾರು 30 ವರ್ಷದ ವಿವಾಹಿತ ಮಹಿಳೆಯ ಶವ ಪತ್ತೆಯಾಗಿದೆ. ಅದರಂತೆ ರಾಜವಾಳ ಗ್ರಾಮದ ನದಿಯಲ್ಲಿ ಒಂದು ಶವ, ನೆಲೋಗಿ ಪೊಲೀಸ್ ಠಾಣೆ ವ್ಯಾಪ್ತಿಯ ಬಳ್ಳುಂಡಗಿ ಸೀಮಾಂತರದ ಭೀಮಾ ನದಿಯಲ್ಲಿ ಒಂದು ಶವ ಹೀಗೆ ತಿಂಗಳ ಅಂತರದಲ್ಲಿ ಐದಾರು ಶವಗಳು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ದುಷ್ಕರ್ಮಿಗಳು ಕೊಲೆಗೈದು ಭೀಮಾ ನದಿಯಲ್ಲಿ ಬಿಸಾಡಿರುವ ಅನುಮಾನ ಜನರಲ್ಲಿ ಮೂಡಿದೆ. ಜಿಲ್ಲೆಯ ಪೊಲೀಸರು ಪ್ರಕರಣದ ಬೆನ್ನಟ್ಟಿದ್ದು, ಶವಗಳು ಎಲ್ಲಿಂದ ಬರ್ತಿವೆ?, ಸತ್ತವರು ಯಾರು ಎಂಬ ಬಗ್ಗೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. ತನಿಖೆ ನಂತರವಷ್ಟೇ ಶವಗಳ ಹಿಂದಿನ ನಿಗೂಢ ರಹಸ್ಯ ಬಯಲಿಗೆ ಬರಬೇಕಿದೆ.