ಕಲಬುರಗಿ: ತಾವು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಡ್ರಗ್ಸ್ ದಂಧೆಯ ಕುರಿತು ಪೊಲೀಸರಿಂದ ತನಿಖೆ ನಡೆಸಬಹುದಿತ್ತು ಎಂದು ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರ ಆರೋಪಕ್ಕೆ ಡಿಸಿಎಂ ಲಕ್ಷ್ಮಣ ಸವದಿ ಕಿಡಿಕಾರಿದ್ದಾರೆ.
ನಗರಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಕೆಡವಲು ಡ್ರಗ್ಸ್ ದಂಧೆ ಹಾಗೂ ಹಣ ಬಳಕೆಯನ್ನು ಬಿಜೆಪಿ ಸರ್ಕಾರ ಮಾಡಿತ್ತು ಎಂಬ ಮಾಜಿ ಸಿಎಂ ಹೆಚ್.ಡಿ.ಕೆ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದರು. ಸರ್ಕಾರ ಅವರದ್ದೇ ಇತ್ತು. ಆಗ ಗುಪ್ತಚರ ಇಲಾಖೆ ಏನ್ ಮಾಡ್ತಿತ್ತು? ಪೊಲೀಸರಿಂದ ತನಿಖೆ ಮಾಡಿಸ್ಬೇಕಿತ್ತು, ಆಗ ಸುಮ್ಮನೆ ಕುಳಿತಿದ್ದರ ಅರ್ಥವೇನು ಎಂದು ಪ್ರಶ್ನಿಸಿದರು.
ಹೆಚ್ಡಿಕೆ ಅವರು ಮುಖ್ಯಮಂತ್ರಿಯಾಗಿ ಅಸಮರ್ಥರಾಗಿರೋದನ್ನ ತೋರಿಸಿಕೊಳ್ಳುತ್ತಿದ್ದಾರೆ ಎಂದ ಸವದಿ, ಸುಮ್ನೆ ಈಗ ರಾಜಕೀಯವಾಗಿ ಟೀಕೆ ಮಾಡೋದು ಸರಿಯಲ್ಲ ಎಂದು ಹರಿಹಾಯ್ದರು.
ಸಂಪುಟ ವಿಸ್ತರಣೆ ಸಿ ಎಂ ವಿವೇಚನೆಗೆ ಬಿಟ್ಟದ್ದು: ಇದೇ ವೇಳೆ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿ ಸಂಪುಟ ವಿಸ್ತರಣೆ, ಪುನರ್ ರಚನೆ ಮಾಡೋದು ಸಿಎಂ ವಿವೇಚನೆಗೆ ಬಿಟ್ಟದ್ದು ಎಂದು ತಿಳಿಸಿದ ಅವರು, ಸಿಎಂ ದೆಹಲಿಗೆ ಹೋಗುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.