ಕಲಬುರಗಿ: ನಿವೃತ್ತ ಕಾರ್ಮಿಕನ ಬಾಕಿ ಇರುವ ವೇತನ ಕೊಡಿಸಿ ಎಂದು ಕಾರ್ಮಿಕ ಮುಖಂಡನೋರ್ವ ಜಿಲ್ಲಾಧಿಕಾರಿ ಮುಂದೆ ಹೂವು, ಹಣ್ಣು, ಹಣ ಹಾಗೂ ವಿಷದ ಬಾಟಲಿ ತಂದಿಟ್ಟು ಜಿಲ್ಲಾಧಿಕಾರಿಗಳಿಂದ ಛೀಮಾರಿ ಹಾಕಿಸಿಕೊಂಡ ಘಟನೆ ಅಫಜಲಪುರ ಪಟ್ಟಣದಲ್ಲಿ ನಡೆಯಿತು. ಅಫಜಲಪುರ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಡಿಸಿ ಯಶವಂತ ಗುರುಕರ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತಿದ್ದರು.
ಗೌರ (ಬಿ) ಗ್ರಾಮ ಪಂಚಾಯಿತಿಯಲ್ಲಿ ನೌಕರರಾಗಿ ದುಡಿದು ನಿವೃತ್ತಿಯಾದ ವ್ಯಕ್ತಿಗೆ ನಾಲ್ಕು ವರ್ಷದಿಂದ ಬಾಕಿ ಇರುವ ವೇತನ ನೀಡದೆ ಸತಾಯಿಸಲಾಗುತ್ತಿದೆ. ಕೇಳಲು ಹೋದರೆ ಪಿಡಿಒ ಲಂಚ ಕೇಳುತ್ತಿದ್ದಾರೆ ಎಂದು ಕಾರ್ಮಿಕ ಮುಖಂಡ ಜಿಲ್ಲಾಧಿಕಾರಿಗಳಿಗೆ ಹೇಳಿದ್ದಾನೆ. ಈ ಸಂದರ್ಭದಲ್ಲಿ ತಾನು ತಂದಿದ್ದ ಹೂವು, ಹಣ್ಣು ಹಾಗು 1,500 ರೂ ನಗದು, ವಿಷದ ಬಾಟಲಿ ಇರುವ ಬುಟ್ಟಿಯನ್ನು ಜಿಲ್ಲಾಧಿಕಾರಿಗಳ ಮುಂದಿಟ್ಟಿದ್ದಾನೆ. ಇದಕ್ಕೆ ಕೋಪಗೊಂಡ ಜಿಲ್ಲಾಧಿಕಾರಿ ಮುಖಂಡನನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಈ ರೀತಿ ಭಯ ಹುಟ್ಟಿಸುವ ಡ್ರಾಮಾ ಮಾಡಬೇಡಿ, ಗೆಟ್ ಔಟ್ ಎಂದರು.
ಮುಖಂಡನ ಪಕ್ಕದಲ್ಲಿ ನಿಂತಿದ್ದ ನೊಂದ ವ್ಯಕ್ತಿಯನ್ನು ಕರೆದು ಸಮಸ್ಯೆಗಳಿದ್ರೆ ನೇರವಾಗಿ ಬಂದು ಭೇಟಿಯಾಗಿ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ಜಿಲ್ಲಾಡಳಿತ ಇದೆ. ಇಂಥವರನ್ನು ಮುಂದಿಟ್ಟುಕೊಂಡು ಬರಬೇಡಿ ಎಂದು ತಾಕೀತು ಮಾಡಿದರು. ಅಲ್ಲದೇ ಸ್ಥಳದಲ್ಲೇ ಇದ್ದ ಅಧಿಕಾರಿಗಳಿಂದ ವೇತನ ಬಿಡುಗಡೆ ಮಾಡದಿರುವುದಕ್ಕೆ ಕಾರಣ ಕೇಳಿದರು. ಸಮಂಜಸ ಉತ್ತರ ಸಿಗದಿದ್ದಾಗ ಗೌರ(ಬಿ) ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಇವತ್ತು ಸಾಯಂಕಾಲದೊಳಗೆ ಅವರಿಗೆ ಸಲ್ಲಬೇಕಾದ ಸಂಬಳ ನೀಡಬೇಕು. ಇಲ್ಲದಿದ್ದರೆ ನಿಮ್ಮನ್ನು ಸೇವೆಯಿಂದ ಅಮಾನತು ಮಾಡುವುದಾಗಿ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಶಿವಮೊಗ್ಗ: ಪೊಲೀಸ್ ಸಿಬ್ಬಂದಿ ಎದೆಗೆ ಚಾಕು ಇರಿದ ಆರೋಪಿ ಕಾಲಿಗೆ ಗುಂಡೇಟು