ಕಲಬುರಗಿ: ವಿದ್ಯುತ್ ತಗುಲಿ ನರಳಾಡುತ್ತಿದ್ದ ವ್ಯಕ್ತಿಯನ್ನು ಬಿಡಿಸಲು ಹೋದ ಮೂವರಿಗೆ ಶಾಕ್ ಹೊಡೆದು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಸೇಡಂ ತಾಲೂಕಿನ ಮಳಖೇಡ್ ಪಟ್ಟಣದ ಬಸ್ ನಿಲ್ದಾಣದ ಬಳಿ ನಡೆದಿದೆ.
ಬಿಜನಳ್ಳಿ ಗ್ರಾಮಕ್ಕೆ ತೆರಳುವ ರಸ್ತೆ ಪಕ್ಕದಲ್ಲಿ ಪಾನ್ ಶಾಫ್ ಇಟ್ಟುಕೊಂಡಿದ್ದ ವ್ಯಕ್ತಿ, ಪಕ್ಕದ ವಿದ್ಯುತ್ ಕಂಬಕ್ಕೆ ಬಟ್ಟೆ ಕಟ್ಟುವ ವೇಳೆ ಕರೆಂಟ್ ಶಾಕ್ ಹೊಡೆದಿದೆ. ತಕ್ಷಣ ಅಲ್ಲೆ ಇದ್ದ ಮೂವರು ಆತನನ್ನು ಬಿಡಿಸಲು ಹೋದಾಗ ಮೂವರಿಗೂ ಶಾಕ್ ತಗುಲಿದೆ. ಘಟನೆಯಲ್ಲಿ ಮಂಜೂರ್, ಹತ್ತಾರ್, ಅಹ್ಮದ್ ಇಕ್ಬಾಲ್ ಹಾಗೂ ಆನಂದ್ ಎಂಬ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಇದರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತಾಗಿ ಮಳಖೇಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.