ಕಲಬುರಗಿ: ಬೆಳೆ ಹಾನಿಯಾದ ಬಗ್ಗೆ ಅನ್ನದಾತ ತಾನೇ ಆಂಡ್ರಾಯ್ಡ್ ಮೂಬೈಲ್ ಮೂಲಕ ಸಮೀಕ್ಷೆ ಮಾಡಬಹುದಾದ ಆ್ಯಪ್ ಸರ್ಕಾರ ರಚಿಸಿದೆ. ಆದರೆ, ಅನಕ್ಷರಸ್ಥ ರೈತರು ಮೊಬೈಲ್ ದಿಂದ ಹೇಗೆ ಸಮೀಕ್ಷೆ ಮಾಡಬೇಕು. ಫೋಟೋ ಸಮೇತ ದಾಖಲಿಸುವುದು ಹೇಗೆ ಎಂದು ತಿಳಿದುಕೊಳ್ಳುವಷ್ಟರಲ್ಲಿ ನಿಗದಿತ ಸಮಯ ಮುಕ್ತಾಯವಾಗಿದೆ.
ಹೌದು, ಪ್ರವಾಹ, ಅತಿವೃಷ್ಟಿ, ಕೀಟಬಾದೆ ಸೇರಿ ಬೆಳೆ ಹಾನಿ ಬಗ್ಗೆ ಸಮೀಕ್ಷಾ ವರದಿ ದಾಖಲಿಸಲು ಕಂದಾಯ ಇಲಾಖೆ ಮೂಲಕ ಸರ್ಕಾರ ಹೊಸ ಆ್ಯಪ್ ಆರಂಭಿಸಿದೆ. ಪ್ರತಿ ವರ್ಷ ಅಕಾಲಿಕ ಮಳೆ, ಬರದಿಂದ ತತ್ತರಿಸಿ ಹೋಗಿರುವ ರೈತರಿಗೆ ಒಂದಿಷ್ಟು ಅನಕೂಲವಾಗಿದ್ದು ನಿಜ. ಆದರೆ, ಈಗ ಆಂಡ್ರಾಯ್ಡ್ ಮೊಬೈಲ್ ಬಳಸುವ ಅನಿವಾರ್ಯತೆ ರೈತರಿಗೆ ಎದುರಾಗಿದೆ.
ಅತಿವೃಷ್ಟಿಯಿಂದ ಹಾನಿಯಾದ ಬೆಳೆ ಬಗ್ಗೆ ಜಿಲ್ಲೆಯ ಕೇಲ ರೈತರು ಆ್ಯಪ್ ಮೂಲಕ ದಾಖಲಿಸಿಕೊಂಡಿದ್ದಾರೆ. ಯಡ್ರಾಮಿ ತಾಲೂಕಿನ ಕರಕಿಹಳ್ಳಿ ಗ್ರಾಮದಲ್ಲಿ ಕೆಲ ರೈತರು ಬೆಳೆ ಸಮೀಕ್ಷೆಯನ್ನು ತಮ್ಮ ಮೂಬೈಲ್ ಮುಖಾಂತರ ಮಾಡಿದ್ದಾರೆ. ಬೆಳೆಯ ಸಮೀಕ್ಷೆಯನ್ನು ಅಂತರ್ಜಾಲದ ಮುಖಾಂತರ ಕಳುಹಿಸಿ ಕೊಟ್ಟಿದ್ದಾರೆ.
ಆದರೆ, ಸಾಮಾನ್ಯವಾಗಿ ಗ್ರಾಮಗಳಲ್ಲಿ ರೈತರು ಆಂಡ್ರಾಯ್ಡ್ ಮೊಬೈಲ್ ಬಳಕೆ ಮಾಡುವುದಿಲ್ಲ, ಆದರೂ ಈಗ ಬಳಕೆ ಅನಿವಾರ್ಯತೆ ತಂದೊಡ್ಡಿದೆ. ಸಾಲಸೂಲ ಆದ್ರೂ ಮಾಡಿ ಮೊಬೈಲ್ ಖರೀದಿಸುವಂತಾಗಿದೆ. ಇದೇ ತಿಂಗಳು 24 ರವರೆಗೆ ರೈತರು ತಮ್ಮ ಮೊಬೈಲ್ ಮೂಲಕ ಸಮೀಕ್ಷಾ ವರದಿ ದಾಖಲಿಸಿದ್ದಾರೆ.
ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದಾಗಿ ಅತಿವೃಷ್ಟಿ ಸೃಷ್ಟಿಯಾಗಿ ಬೆಳೆ ಹಾನಿಯಾಗಿದೆ. ಕೆಲ ರೈತರು ಹೇಗೋ ಕಷ್ಟಪಟ್ಟು ಮೊಬೈಲ್ ಜೋಡಿಸಿ ತಮಗಾದ ಹಾನಿ ಬಗ್ಗೆ ಸಮೀಕ್ಷೆ ದಾಖಲಾತಿ ಸಲ್ಲಿಸಿದ್ದಾರೆ. ಹಲವು ರೈತರು ತಮಗಾದ ಹಾನಿ ದಾಖಲಿಸಬೇಕು ಎನ್ನುವಷ್ಟರಲ್ಲಿ ನಿಗದಿತ ಅವಧಿ ಮುಗಿದೋಗಿದೆ. ಹೀಗಾಗಿ ಈ ಯೋಜನೆಗೆ ರೈತ ವರ್ಗದಲ್ಲಿ ಮಿಶ್ರ ಪ್ರತಿಕ್ರಿಯೆ ಕೇಳಿ ಬಂದಿದೆ.
ಕೈಯಲ್ಲಿ ಆಂಡ್ರಾಯ್ಡ್ ಮೊಬೈಲ್ ಇಲ್ಲದಿರುವುದು, ಕುಟುಂಬ ಸದಸ್ಯರು ಮೊಬೈಲ್ ಹೊಂದಿದ್ದರೆ, ಅದನ್ನು ರೈತರಿಗೆ ಬಳಸಲು ಬರದಿರುವುದು, ಮೊಬೈಲ್ ಖರೀದಿಸುವ ಸಾಮರ್ಥ್ಯ ಇಲ್ಲದಿರುವ ಹಾಗೂ ಎಲ್ಲವು ಇದ್ದರೂ ನೆಟ್ವರ್ಕ್ ಸಮಸ್ಯೆ ಎದುರಾಗುವುದರಿಂದ ರೈತರು ಸ್ವಯಂ ಸಮೀಕ್ಷೆ ದಾಖಲಿಸಲು ಆಗದೇ ಯೋಜನೆಗೆ ಹಿನ್ನಡೆಯಾಗಿದೆ. ಸರ್ಕಾರ ಈ ಬಗ್ಗೆ ಸಮರ್ಪಕವಾಗಿ ಚಿಂತನೆ ನಡೆಸಬೇಕಿದೆ. ಕೇವಲ ಅನ್ನದಾತನ ಸಮಾಧಾನಕ್ಕೆ ಯೋಜನೆ ಸೀಮಿತವಾಗದೇ ನಷ್ಟ ಬರಿಸುವ ಯೋಜನೆ ಆಗಲಿ ಅನ್ನೋದು ರೈತರ ಆಗ್ರಹವಾಗಿದೆ.