ಕಲಬುರಗಿ: ಕೊರೊನಾ ನಿಯಂತ್ರಣಕ್ಕೆ ಪಣತೊಟ್ಟಿರುವ ಕಲಬುರಗಿ ಜಿಲ್ಲಾಡಳಿತ ಉತ್ತಮ ಚಿಕಿತ್ಸೆ ನೀಡುತ್ತಿರುವ ಪರಿಣಾಮ ಸೋಂಕಿತರು ತೀವ್ರ ಗತಿಯಲ್ಲಿ ಗುಣಮುಖರಾಗುತ್ತಿದ್ದಾರೆ. ಭಾನುವಾರದವರೆಗೆ 1,398 ಸೋಂಕಿತರ ಪೈಕಿ 1,009 ಜನ ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಕಲಬುರಗಿಗೆ 2ನೇ ಸ್ಥಾನ:
ರಾಜ್ಯದಲ್ಲಿ ಸೋಂಕಿತರು ಗುಣಮುಖರಾಗುತ್ತಿರುವುದನ್ನು ಅವಲೋಕಿಸಿದಾಗ ಉಡುಪಿ ಜಿಲ್ಲೆಯಲ್ಲಿ 1,179 ಸೋಂಕಿತರ ಪೈಕಿ 1,042 ಗುಣಮುಖರಾಗಿದ್ದು, (88.37%) ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಕಲಬುರಗಿ ಜಿಲ್ಲೆಯಲ್ಲಿ 1,398 ಸೋಂಕಿತರ ಪೈಕಿ 1,009 ರೋಗಿಗಳು ಗುಣಮುಖರಾಗಿದ್ದಾರೆ. (72.17%) ಈ ಮೂಲಕ ಎರಡನೇ ಸ್ಥಾನದಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ 1,398 ಕೊರೊನಾ ಪೀಡಿತರ ಪೈಕಿ 1,009 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದು, ಗುಣಮುಖರಾದವರ ಪ್ರಮಾಣ ಶೇ.72.17 ಕ್ಕೆ ಏರಿಕೆಯಾಗಿದೆ. ಪ್ರಸ್ತುತ 371 ರೋಗಿಗಳು ಸಕ್ರಿಯರಾಗಿ ಚಿಕಿತ್ಸೆ ಪಡೆಯುತ್ತಿದ್ದು, 18 ಜನ ಸಾವನ್ನಪ್ಪಿದ್ದಾರೆ ಎಂದರು.
ಸೋಂಕಿಗೆ ಸಾವನ್ನಪ್ಪಿದ 18 ಜನರಲ್ಲಿ 60 ವರ್ಷ ಮೇಲ್ಪಟ್ಟವರು 8 ಜನ ಹಾಗೂ 55 ವರ್ಷ ಮೇಲ್ಪಟ್ಟವರು 6 ಜನರಿದ್ದಾರೆ. ಮರಣ ಹೊಂದಿದ 18 ಜನರ ಪೈಕಿ ಬಹುತೇಕರು ಮಾರಣಾಂತಿಕ, ದೀರ್ಘಕಾಲದ ಮತ್ತು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ.
ಐ.ಸಿ.ಯು ನಲ್ಲಿ 10 ಜನ ಮಾತ್ರ:
371 ಸಕ್ರಿಯ ಕೊರೊನಾ ಪೀಡಿತರ ಪೈಕಿ ಕೇವಲ 10 ಜನ ಮಾತ್ರ ಐ.ಸಿ.ಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರಿಗೆ ಸೋಂಕಿನ ತೀವ್ರತೆ ಇಲ್ಲದಿರುವುದರಿಂದ ಸಾಮಾನ್ಯ ವಾರ್ಡ್ ನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಅಚ್ಚರಿಯ ಸಂಗತಿ ಅಂದ್ರೆ ಪ್ರಸ್ತುತ ಜಿಲ್ಲೆಯಲ್ಲಿ ಯಾರೊಬ್ಬ ಕೋವಿಡ್-19 ರೋಗಿಯೂ ವೆಂಟಿಲೇಟರ್ ಮೇಲೆ ಚಿಕಿತ್ಸೆ ಪಡೆಯುತ್ತಿಲ್ಲ ಎಂದು ಜಿಲ್ಲಾಧಿಕಾರಿ ಶರತ್ ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಕೊರೊನಾ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಜಿಲ್ಲೆಯ ಮಹಾ ಜನತೆ, ಜಿಲ್ಲಾಡಳಿತ ಮತ್ತು ಸರ್ಕಾರದ ಸೂಚನೆಗಳನ್ನು ಪಾಲಿಸುವ ಮೂಲಕ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.