ಕಲಬುರಗಿ: ದೇಶದಲ್ಲಿ ಪಾರದರ್ಶಕ ಆಡಳಿತ ಬಂದಲ್ಲಿ ಮಾತ್ರ ದೇಶ ಉಳಿಯಲು ಸಾಧ್ಯವೆಂದು ನಟ, ನಿರ್ದೇಶಕ ಹಾಗೂ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಅಭಿಪ್ರಾಯಪಟ್ಟಿದ್ದಾರೆ.
ಕಲಬುರಗಿ ಲೋಕಸಭೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಮಹೇಶ್ ಲಂಬಾಣಿ ಪರವಾಗಿ ಪ್ರಚಾರಕ್ಕೆ ಆಗಮಿಸಿದ್ದ ಅವರು ನಗರದ ಕನ್ನಡ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಬಂಡವಾಳಶಾಹಿಗಳ ಕೈಯಲ್ಲಿ ರಾಜಕೀಯ ಸಿಲುಕಿಕೊಂಡಿದೆ. ಭ್ರಷ್ಟಾಚಾರ ಮಿತಿ ಮೀರಿದ್ದು, ಅದನ್ನು ತಡೆಗಟ್ಟಬೇಕೆಂದರೆ ಮೊದಲು ಮತದಾರರು ಜಾಗೃತರಾಗಬೇಕು. ಒಳ್ಳೆಯ ಅಭ್ಯರ್ಥಿಗಳನ್ನು ಗೆಲ್ಲಿಸಿ, ದೆಲ್ಲಿಗೆ ಕಳಿಸಬೇಕು. ಅಂದಾಗ ಮಾತ್ರ ದೇಶದಲ್ಲಿ ಬದಲಾವಣೆ ಬರಲು ಸಾಧ್ಯವಿದೆ ಎಂದರು.
ದೇಶದಲ್ಲಿ 80-20 ಇದ್ದರೂ ಅಧಿಕಾರವೆಲ್ಲವೂ ಇರೋದು ಕೇವಲ ಶೇ. 20ರಷ್ಟು ಇರುವ ರಾಜಕಾರಣಿಗಳ ಕೈಯಲ್ಲಿ. ಇನ್ನೂ ಕೂಡ ಎಲ್ಲರೂ ಅವರ ಹತ್ತಿರವೇ ಕೈ ಚಾಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಇಂತಹ ವ್ಯವಸ್ಥೆ ಬದಲಾವಣೆ ತರುವ ನಿಟ್ಟಿನಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಬಳ್ಳಾರಿ ಜಿಲ್ಲೆ ಹೊರತುಪಡಿಸಿ ಉಳಿದ 27 ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ ಎಂದು ಉಪೇಂದ್ರ ವಿವರಿಸಿದರು.
ಮಂಡ್ಯ ಲೋಕಸಭೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿರುವ ನಟಿ ಸುಮಲತಾ ಸ್ಪರ್ಧೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉಪೇಂದ್ರ ಉತ್ತರಿಸಿದ್ದು ಹೀಗೆ. ದೊಡ್ಡವರ ವಿಷಯ ನಮಗ್ಯಾಕೆ. ಅಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಸ್ಪರ್ಧೆ ಮಾಡಿದ್ದಾರೆ. ಅವರ ಪರವಾಗಿ ನಾನು ಪ್ರಚಾರ ಮಾಡಿ ಗೆಲ್ಲಿಸುವ ಪ್ರಯತ್ನ ಮಾಡುತ್ತೇವೆ ಎಂದು ಮುಗುಳ್ನಕ್ಕರು.