ಕಲಬುರಗಿ: ಪೆರೋಲ್ ಮೇಲೆ ಹೊರ ಬಂದು ಜೈಲಿಗೆ ಮರಳಿದ್ದ 10 ಜನ ಕೈದಿಗಳಿಗೆ ಕೊರೊನಾ ದೃಢಪಟ್ಟಿದ್ದು, ಈ ಮೂಲಕ ಕೇಂದ್ರ ಕಾರಾಗೃಹಕ್ಕೂ ಹೆಮ್ಮಾರಿ ಕೊರೊನಾ ಕಾಲಿಟ್ಟಂತಾಗಿದೆ.
ಒಟ್ಟು 60 ಕೈದಿಗಳು ಪೆರೋಲ್ ಮೇಲೆ ಹೋಗಿ ಮರಳಿ ಜೈಲಿಗೆ ಬಂದಿದ್ದಾರೆ. ಈ ಪೈಕಿ 10 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜೈಲಿಗೆ ಮರಳಿದ ಕೈದಿಗಳನ್ನು ಮುಂಜಾಗ್ರತಾ ಕ್ರಮವಾಗಿ ಪ್ರತ್ಯೇಕವಾಗಿಡಲಾಗಿತ್ತು. ಅವರ ಗಂಟಲು ದ್ರವ ಸಂಗ್ರಹಿಸಲಾಗಿತ್ತು.
ಇದೀಗ ವರದಿ ಬಂದಿದ್ದು, 10 ಕೈದಿಗಳಿಗೆ ಸೋಂಕು ಇರುವುದು ದೃಢಪಟ್ಟಿದೆ. ಸದ್ಯ ಸೋಂಕಿತ ಕೈದಿಗಳನ್ನು ಕೊರೊನಾ ಕೇರ್ ಸೆಂಟರ್ಗೆ ಶಿಫ್ಟ್ ಮಾಡಲಾಗಿದೆ. ಪೆರೋಲ್ನಿಂದ ಮರಳಿದವರನ್ನು ಪ್ರತ್ಯೇಕವಾಗಿಟ್ಟ ಕಾರಣ ಹಾಗೂ ಹೊರಗಿನಿಂದ ಬಂದವರಿಗಾಗಿಯೇ ಪ್ರತ್ಯೇಕ ಜೈಲು ವ್ಯವಸ್ಥೆ ಮಾಡಿ ಮುಂಜಾಗ್ರತಾ ಕ್ರಮ ವಹಿಸಿದ್ದರಿಂದ ಜೈಲಿನಲ್ಲಿರೋ ಇತರೆ ಕೈದಿಗಳಿಗೆ ಯಾವುದೇ ತೊಂದರೆಯಿಲ್ಲ. ಅವರಿಗೆ ಕೊರೊನಾ ಸೋಂಕು ಹರಡೋ ಆತಂಕವಿಲ್ಲ ಎಂದು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ರಮೇಶ್ ಮಾಹಿತಿ ನೀಡಿದ್ದಾರೆ.