ಕಲಬುರಗಿ: ಬಡಾವಣೆಗಳ ಅಭಿವೃದ್ಧಿಗಾಗಿ ಹುಟ್ಟಿಕೊಳ್ಳುವ ಕಾಲೋನಿ ಕಲ್ಯಾಣ ಸಂಘಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ ಹೆಚ್ಚಿನ ಅಭಿವೃದ್ಧಿ ನಿರೀಕ್ಷಿಸಬಹುದಾಗಿದೆ. ಇಂತಹ ಕಾಲೋನಿ ಕಲ್ಯಾಣ ಸಂಘಗಳು ಕಲಬುರಗಿ ನಗರದಲ್ಲಿ ಉತ್ತಮವಾಗಿವೇ ಕಾರ್ಯ ನಿರ್ವಹಿಸುತ್ತಿವೆ.
ಪಟ್ಟಣ ಪ್ರದೇಶಗಳಲ್ಲಿ ಬಡಾವಣೆಗಳ ಅಭಿವೃದ್ಧಿಗಾಗಿ ಕಾಲೋನಿ ಕಲ್ಯಾಣ ಸಂಘಗಳು ಇರುವುದು ಸರ್ವೇ ಸಾಮಾನ್ಯ. ಬಡಾವಣೆಗಳಲ್ಲಿರುವ ಮನೆಗಳಿಂದ ಹಣ ಸಂಗ್ರಹ ಮಾಡುವ ಮೂಲಕ ಬಡಾವಣೆಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 55 ವಾರ್ಡ್ಗಳಿದ್ದು, 300ಕ್ಕೂ ಅಧಿಕ ಕಾಲೋನಿ ಕಲ್ಯಾಣ ಸಂಘಗಳಿವೆ.
ಆದರೆ ಈ ಪೈಕಿ ಬಹುತೇಕ ಸಂಘಗಳು ನೋಂದಣಿ ಮಾಡಿಸಿಕೊಂಡಿಲ್ಲ. ಇನ್ನೂ ನೋಂದಣಿ ಮಾಡಿಸಿಕೊಂಡ ಅನೇಕ ಸಂಘಗಳು ರಿನಿವಲ್ ಮಾಡಿಸಿಕೊಂಡಿಲ್ಲ. ಆದರೂ ಸಂಘಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವ ಮೂಲಕ ತಮ್ಮ ತಮ್ಮ ಬಡಾವಣೆ ಅಭಿವೃದ್ಧಿ ಹಾಗೂ ಬಡಾವಣೆಯ ಜನರ ಅಭಿವೃದ್ಧಿಗೆ ಶ್ರಮಿಸುತ್ತಿವೆ.
150ಕ್ಕೂ ಅಧಿಕ ಕಾಲೋನಿ ಕಲ್ಯಾಣ ಸಂಘಗಳು ಸದ್ಯ ಸಂಪೂರ್ಣ ಆ್ಯಕ್ಟಿವ್ ಆಗಿದ್ದು, ವಾಸವಾಗಿರುವ ಪ್ರತಿ ಕುಟುಂಬದಿಂದ ಇಂತಿಷ್ಟು ಹಣ ಎಂದು ಪ್ರತಿ ವರ್ಷ ಸಂಗ್ರಹಿಸಲಾಗುತ್ತಿದೆ. ಅದೇ ಹಣದಿಂದ ಬಡಾವಣೆಗಳಲ್ಲಿ ಹಸಿರು ವಾತಾವರಣ ನಿರ್ಮಾಣ, ಆರೋಗ್ಯ ತಪಾಸಣಾ ಶಿಬಿರ, ಕಣ್ಣಿನ ಶಸ್ತ್ರಚಿಕಿತ್ಸೆ, ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ, ವಿಶೇಷ ಶೈಕ್ಷಣಿಕ ತರಬೇತಿಗಳು, ಕೌಶಲ್ಯ ತರಬೇತಿಗಳು, ಸ್ವಾವಲಂಬಿ ಬದುಕಿಗಾಗಿ ಬಡವರಿಗೆ ಸಾಲ ನೀಡುವುದು ಇಂತಹ ಅನೇಕ ಮಾದರಿ ಕಾರ್ಯಗಳನ್ನು ಮಾಡಲಾಗುತ್ತಿದೆ.
ಇದನ್ನೂ ಓದಿ: ಸಮಸ್ಯೆಗೆ ಶೀಘ್ರ ಸ್ಪಂದನೆ: ಬಡಾವಣೆ ನಿವಾಸಿಗಳ ಸಂಘಗಳಿಂದ ಜನರಿಗಿಲ್ಲ ತೊಂದರೆ
ಕಲಬುರಗಿ ಹಿಂದುಳಿದ ಪ್ರದೇಶವಾದರಿಂದ ಜನರಿಂದ ಹೆಚ್ಚಿನ ಮೊತ್ತ ಸಂಗ್ರಹವಾಗುವುದಿಲ್ಲ. ಪ್ರತಿ ಮನೆಗಳಿಗೆ ಭಾರವಾಗದಂತೆ ಕಡಿಮೆ ಮೊತ್ತ ಸಂಗ್ರಹ ಮಾಡಲಾಗುತ್ತಿದೆ ಮತ್ತು ಅದರ ಲೆಕ್ಕ ಪತ್ರವಿಡಲಾಗುತ್ತಿದೆ. ಪ್ರತಿ ಎರಡು ವರ್ಷ ಮೂರು ವರ್ಷಕ್ಕೊಮ್ಮೆ ಮತ ಚಲಾಯಿಸುವ ಮೂಲಕ ಅಧ್ಯಕ್ಷ-ಉಪಾಧ್ಯಕ್ಷ-ಕಾರ್ಯಧ್ಯಕ್ಷ, ಖಜಾಂಚಿ ಹುದ್ದೆಗಳಿಗೆ ಆಂತರಿಕವಾಗಿ ಆಯ್ಕೆ ಮಾಡಲಾಗತ್ತಿದೆ. ಪ್ರತಿಯೊಂದು ಸರ್ಕಾರದಿಂದ ನಿರೀಕ್ಷೆ ಮಾಡುವ ಬದಲಾಗಿ ಇಂತಹ ಚಿಕ್ಕಪುಟ್ಟ ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡು ಯಾರಿಗೂ ಹೊರೆಯಾಗದಂತೆ ಮಾದರಿ ಕಾರ್ಯಗಳನ್ನು ಮಾಡಬಹುದು ಅನ್ನೋದು ಬಿಸಿಲೂರು ಕಲಬುರಗಿ ಜನತೆಯ ಮಾತಾಗಿದೆ.