ಕಲಬುರಗಿ : "ನಾಡಿನ ಜನರ ಆಶೋತ್ತರಗಳಿಗೆ ಸ್ಪಂದಿಸುವ ರೀತಿಯಲ್ಲಿ ಈ ಬಾರಿ ಜನಪರ ಬಜೆಟ್ ಮಂಡಿಸಲಾಗುವುದು" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಂಗಳವಾರ ಅಫಜಲಪೂರ ತಾಲೂಕಿನ ಗಾಣಗಾಪುರಕ್ಕೆ ಆಗಮಿಸಿದ ಸಿಎಂ, ಶ್ರೀ ದತ್ತಾತ್ರೇಯನ ದರ್ಶನ ನಡೆದು, ವಿಶೇಷ ಪೂಜೆ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ದತ್ತ ಕ್ಷೇತ್ರದ ಸಮಗ್ರ ಅಭಿವೃದ್ದಿ: "ಕಾಶಿ ವಿಶ್ಚನಾಥ ಮತ್ತು ಉಜ್ಜಯಿನಿ, ಕಾಳಹಸ್ತಿ ಮಾದರಿಯಲ್ಲಿ ಗಾಣಗಾಪುರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ 2022-23ನೇ ಸಾಲಿಗೆ 5 ಕೋಟಿ ರೂ. ನೀಡಲಾಗಿದೆ. ಜಿಲ್ಲಾಡಳಿತ ದತ್ತನ ಕ್ಷೇತ್ರದ ಅಭಿವೃದ್ಧಿಗೆ 67 ಕೋಟಿ ರೂ. ವೆಚ್ಚದ ಡಿ.ಪಿ.ಆರ್ ಸಿದ್ದಪಡಿಸಿದೆ. ಬರುವ ಆಯವ್ಯಯದಲ್ಲಿ ಇದನ್ನು ಘೋಷಿಸಿ ಅನುಷ್ಠಾನಕ್ಕೆ ತರಲಾಗುವುದು" ಎಂದರು.
ನಾಲ್ಕೈದು ರಾಜ್ಯಗಳ ಯಾತ್ರಿಕರು ಬರುವುದರಿಂದ ಯಾತ್ರಿ ಕೇಂದ್ರವನ್ನಾಗಿಸಿ ಅಭಿವೃದ್ಧಿಪಡಿಸಲಾಗುವುದು. ವಿಶೇಷವಾಗಿ, ದೇವಸ್ಥಾನ ಹಾಗೂ ಭೀಮಾ ನದಿ ತೀರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಗಮನಹರಿಸಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಸುದ್ದಿಗಾರರಿಗೆ ಪ್ರಶ್ನೆಗೆ ಉತ್ತರಿಸಿದರು. ಗಾಣಗಾಪೂರದ ದತ್ತನ ಸನ್ನಿಧಿಯಲ್ಲಿ ಸಿಎಂ ಅವರಿಗೆ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಶಾಸಕರಾದ ಬಸವರಾಜ ಮತ್ತಿಮೂಡ, ಶಶಿಲ್ ಜಿ.ನಮೋಶಿ, ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಸಾಥ್ ನೀಡಿದರು. ನಂತರ ಮುಖ್ಯಮಂತ್ರಿಗಳು ವಿಧಾನ ಪರಿಷತ್ ಮುಖ್ಯ ಸಚೇತಕ ವಿಠ್ಠಲ್ ಹೇರೂರ ಅವರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾದರು.
ತೊಗರಿ- ಹೆಕ್ಟೇರ್‌ಗೆ ₹10 ಸಾವಿರ ಪರಿಹಾರ: ಬೀದರ್, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ನೆಟೆ ರೋಗದಿಂದ ತೊಗರಿ ಬೆಳೆ ಸಂಪೂರ್ಣ ಹಾನಿಯಾಗಿತ್ತು. ಇದೀಗ ಬೆಳೆಹಾನಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸರ್ಕಾರ ಪ್ರತಿ ಹೆಕ್ಟೇರ್‌ಗೆ 10,000 ರೂ. ಗಳಂತೆ ಎನ್.ಡಿ.ಆರ್.ಎಫ್./ ಎಸ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ಗರಿಷ್ಟ 2 ಹೆಕ್ಟೇರ್‌ಗೆ ಸೀಮಿತಗೊಳಿಸಿ ಬಾಧಿತ ರೈತರಿಗೆ ಪರಿಹಾರ ಘೋಷಿಸಿದೆ. ಒಟ್ಟು ಪರಿಹಾರ ಮೊತ್ತವು ರೂ. 223 ಕೋಟಿಯೆಂದು ಅಂದಾಜಿಸಲಾಗಿದೆ.
ಬೀದರ್, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಅಕಾಲಿಕ ಮಳೆ ಹಾಗೂ ತದನಂತರ ನವೆಂಬರ್ ತಿಂಗಳಿನಲ್ಲಿ ತಲೆದೋರಿದ ಒಣ/ಶುಷ್ಕ ವಾತಾವರಣದಿಂದ ತೊಗರಿ ಬೆಳೆಹಾನಿಯಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಸುಮಾರು 1.98 ಲಕ್ಷ ಹೆಕ್ಟೇರ್, ಬೀದರ್ ಜಿಲೆಯಲ್ಲಿ ಸುಮಾರು 0.145 ಲಕ್ಷ ಹೆಕ್ಟೇರ್ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಸುಮಾರು 0.1028 ಲಕ್ಷ ಹೆಕ್ಟೇರ್ ಸೇರಿ ಒಟ್ಟಾರೆಯಾಗಿ 2.2278 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ತೊಗರಿ ನೆಟೆ ರೋಗಕ್ಕೆ ತುತ್ತಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ತೊಗರಿ ಬೆಳೆಗಾರರ ನೆರವಿಗೆ ಧಾವಿಸಿದ ಸರ್ಕಾರ: ಹೆಕ್ಟೇರ್ ಗೆ 10 ಸಾವಿರ ರೂ. ಪರಿಹಾರ ಘೋಷಿಸಿದ ಸಿಎಂ