ಕಲಬುರಗಿ: ಅಪ್ರಾಪ್ತ ಬಾಲಕಿಯ ಮದುವೆಗೆ ಸಿದ್ಧತೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ವಿವಾಹವನ್ನು ತಡೆದಿದ್ದಾರೆ. ಈ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿಯಲ್ಲಿ ನಡೆದಿದೆ.
ವಾಡಿ ಪಟ್ಟಣದ ಮರಾಠಿ ಗಲ್ಲಿಯ ನಿವಾಸಿಯೊಬ್ಬರು ತಮ್ಮ 16 ವರ್ಷದ ಮಗಳ ಮದುವೆಗೆ ಸಿದ್ಧತೆ ನಡೆಸಿದ್ದರು. ಮಾಹಿತಿ ತಿಳಿದ ತಕ್ಷಣ ಬಾಲಕಿ ಮನೆಗೆ ದೌಡಾಯಿಸಿದ ಮಾರ್ಗದರ್ಶಿ ಸಂಸ್ಥೆಯ ಚೈಲ್ಡ್ ಲೈನ್ ಉಪ ಕೇಂದ್ರ ಸಂಯೋಜಕ ಸುಂದರ್ ರಾಜ್ ಚಂದನಕೇರಾ, ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ನಾಗಮ್ಮ ಬಳ್ಳೊರಗಿ ಹಾಗೂ ಪೊಲೀಸ್ ಸಿಬ್ಬಂದಿ, ಬಾಲ್ಯ ವಿವಾಹವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಲಕಿಗೆ 18 ವರ್ಷ ಪೂರ್ಣಗೊಂಡ ಬಳಿಕ ಮದುವೆ ಮಾಡಿಸುವುದಾಗಿ ಪೋಷಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ. ಬಳಿಕ ಅಧಿಕಾರಿಗಳು ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಶಿಕ್ಷೆಗಳ ಬಗ್ಗೆ ಪಾಲಕರಿಗೆ ತಿಳಿಹೇಳಿದ್ದಾರೆ.