ಕಲಬುರಗಿ: ಜಿಲ್ಲೆಗೆ ಭೇಟಿ ನೀಡಿದ ಕೇಂದ್ರ ಅಧ್ಯಯನ ತಂಡ, ಅತಿವೃಷ್ಠಿ ಮತ್ತು ನೆರೆಯಿಂದ ಉಂಟಾದ ಹಾನಿಯ ಬಗ್ಗೆ ಪರಿಶೀಲನೆ ನಡೆಸಿದೆ. ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ರಮೇಶ್ ಕುಮಾರ್ ಘಂಟಾ ನೇತೃತ್ವದ ತಂಡ ಕಪನೂರು ಕೈಗಾರಿಕಾ ಪ್ರದೇಶ, ಬಿದನೂರಿಗೆ ಭೇಟಿ ನೀಡಿತು. ಬಿದನೂರು ಕೆರೆ ಒಡೆದಿದ್ದರಿಂದ ಉಂಟಾದ ಹಾನಿಯ ಕುರಿತು ಮಾಹಿತಿ ಸಂಗ್ರಹಿಸಿದರು.
ಈ ವೇಳೆ ಮಾಹಿತಿ ನೀಡಿದ ರೈತರು, ಕೆರೆ ಒಡೆದಿದ್ದರಿಂದ ಒಂದು ಸಾವಿರ ಎಕರೆಗೂ ಅಧಿಕ ಪ್ರದೇಶ ತೊಂದರೆಗೊಳಗಾಗಿದೆ ಎಂದರು. ನಂತರ ಫರತಾಬಾದ್ ಮತ್ತಿತರ ಗ್ರಾಮಗಳಿಗೆ ತಂಡ ಭೇಟಿ ನೀಡಿತು. ಭೀಮಾ ನದಿ ಪ್ರವಾಹದಿಂದ ಹಾನಿಗೀಡಾದ ಪ್ರದೇಶಗಳನ್ನೂ ಪರಿಶೀಲನೆ ಮಾಡಿದರು.
ಕೇಂದ್ರ ಅಧ್ಯಯನ ತಂಡದ ಸದಸ್ಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಮಾತನಾಡಿ, ಎನ್ಡಿಆರ್ಎಫ್ ಅಡಿ ಪರಿಹಾರವನ್ನು ಐದು ವರ್ಷಗಳಿಗೊಮ್ಮೆ ನಿಗದಿ ಮಾಡಲಾಗುತ್ತದೆ. 2020-2025 ರವರೆಗಿನ ಅವಧಿಯ ಪರಿಹಾರ ಮೊತ್ತವನ್ನು ಶೀಘ್ರವೇ ನಿಗದಿ ಮಾಡಲಾಗುತ್ತದೆ. ಆ ನಂತರ ರಾಜ್ಯಕ್ಕೆ ಎಷ್ಟು ಪರಿಹಾರ ಸಿಗಲಿದೆ ಎಂಬುದು ಗೊತ್ತಾಗಲಿದೆ ಎಂದು ತಿಳಿಸಿದರು.
ಓದಿ: ಕಲಬುರಗಿಯಿಂದ ತಿರುಪತಿಗೆ ವಿಮಾನಯಾನ ಪ್ರಾರಂಭಕ್ಕೆ ಮುಹೂರ್ತ ಫಿಕ್ಸ್
ಬಳಿಕ ಮಾತನಾಡಿದ ಅಫಜಲಪುರ ಶಾಸಕ ಎಂ.ವೈ.ಪಾಟೀಲ, ಪ್ರವಾಹದಿಂದ ಹಾನಿಗೀಡಾದ ಮನೆ, ಬೆಳೆಗೆ ಪರಿಹಾರ ಕೊಟ್ಟಿಲ್ಲ. ಎನ್ಡಿಆರ್ಎಫ್ ನಿಯಮಗಳ ಪ್ರಕಾರ ಪರಿಹಾರ ಕೊಟ್ಟರೆ ಏನೂ ಪ್ರಯೋಜವಿಲ್ಲ. ನಿಯಮಗಳಿಗೆ ತಿದ್ದುಪಡಿ ತಂದು ಪರಿಹಾರ ಹೆಚ್ಚಿಸಬೇಕು. ಜಲಾವೃತಗೊಳ್ಳುವ ಹಳ್ಳಿಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.