ಕಲಬುರಗಿ: 2020ರಲ್ಲಿ ಜಿಲ್ಲೆಯಲ್ಲಿ ಭೀಕರ ಪ್ರವಾಹ ಉಂಟಾಗಿತ್ತು. ಭಾರಿ ಮಳೆಯಿಂದ ಕಲಬುರಗಿ ತಾಲೂಕಿನ ಬೋಸಗಾ ಕೆರೆ ತುಂಬಿ ತುಳುಕಿತ್ತು. ನೀರಿನ ರಭಸಕ್ಕೆ ಕೆರೆ ಕೋಡಿ ಬಿದ್ದು ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿತ್ತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ ಬಿ.ಎಸ್ ಯಡಿಯೂರಪ್ಪ ಅವರು ಜಿಲ್ಲೆಯಲ್ಲಿ ವೈಮಾನಿಕ ಸಮಿಕ್ಷೆ ನಡೆಸಿ, ಹಾಳಾದ ರಸ್ತೆಗಳನ್ನು ತಕ್ಷಣವೇ ದುರಸ್ತಿ ಮಾಡುವಂತೆ ಸೂಚಿಸಿದ್ದರು.
ಬಿಎಸ್ವೈ ಸೂಚನೆ ನೀಡಿ ಸರಿ ಸುಮಾರು 2 ವರ್ಷಗಳು ಗತಿಸಿದರೂ ಇನ್ನೂ ಕಾಮಗಾರಿ ಆಗಿಲ್ಲ. ಈ ನಡುವೆ ಈ ಬಾರಿ ಕೂಡ ಭಾರಿ ಮಳೆ ಕಾರಣ ಕೆರೆ ತುಂಬಿ ಮತ್ತೆ ಕೋಡಿ ಬಿದ್ದು, ರೈತರು ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿದ್ದ ರಸ್ತೆ ಕೂಡಾ ಕೊಚ್ಚಿಕೊಂಡು ಹೋಗಿದೆ.
ರಸ್ತೆ ಕೊಚ್ಚಿ ಹೋಗಿ ಒಂದು ತಿಂಗಳಾದರೂ ಜಿಲ್ಲಾಡಳಿತವಾಗಲಿ ಅಥವಾ ಅಧಿಕಾರಿಗಳಾಗಲೀ ಈ ಕಡೆ ಸುಳಿದಿಲ್ಲ. ರಸ್ತೆ ಸಂಪರ್ಕ ಕಡಿತದಿಂದ ಬೋಸಗಾದಿಂದ- ಭೀಮಳ್ಳಿ ಹೋಗುವ ಜನರಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ರಸ್ತೆಯಿಂದ ಭೀಮಳ್ಳಿ 5 ಕಿ.ಮೀ ಆಗಲಿದೆ. ಸುತ್ತಿ ಬಳಸಿ ಬರಬೇಕಾದರೆ 16-18 ಕಿ.ಮೀ ಆಗಲಿದೆ.
ಮತ್ತೊಂದಡೆ ಬೋಸಗಾ ಗ್ರಾಮದ ಬಹುತೇಖ ಜನರ ಜಮೀನು ಈ ಕೆರೆ ಆಚೆಯೇ ಇದೆ. ಎತ್ತಿನ ಬಂಡಿ, ಸೈಕಲ್ ಕೂಡಾ ತೆಗೆದುಕೊಂಡು ಹೋಗುವಂತಿಲ್ಲ. ಹೀಗಾಗಿ ಜಮೀನಿಗೆ ಹೋಗಲು ಆಗದೆ ರೈತರ ಬೆಳೆ ಹಾಳಾಗುತ್ತಿದೆ. ಹಲವು ಬಾರಿ ಗ್ರಾಮಸ್ಥರು ಹೋರಾಟ ಮಾಡಿ ಶಾಸಕರು, ಅಧಿಕಾರಿಗಳ ಗಮನಕ್ಕೆ ತಂದರೂ ಕೂಡಾ ಪ್ರಯೋಜನ ಆಗಿಲ್ಲ.
ಗ್ರಾಮಸ್ಥರ ಕಷ್ಟ ಅಧಿಕಾರಿಗಳಿಗೆ ಕಾಣ್ತಿಲ್ವಾ?. ಕೋಟ್ಯಾಂತರ ರೂ. ಖರ್ಚು ಮಾಡಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳುವ ಜನಪ್ರತಿನಿಧಿಗಳಿಗೆ ಇಲ್ಲಿನ ಸಮಸ್ಯೆ ಕಾಣ್ತಿಲ್ವಾ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸಂಬಂಧ ಪಟ್ಟವರು ಎಚ್ಚೆತ್ತು ಇಲ್ಲಿನ ಜನರ ಸಮಸ್ಯೆ ಪರಿಹರಿಸುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಕೋಡಿ ಬಿದ್ದ ಕಂತನಹಳ್ಳಿ ಕೆರೆ: ಕೊಚ್ಚಿ ಹೋದ ರಸ್ತೆ