ಕಲಬುರಗಿ: ಮತದಾನಕ್ಕೆ ಕೇವಲ 5 ದಿನಗಳು ಮಾತ್ರ ಬಾಕಿ ಇರುವಾಗಲೇ ಪಕ್ಷದ 11 ಕಾರ್ಯಕರ್ತರನ್ನು ಬಿಜೆಪಿ ಉಚ್ಛಾಟಿಸಿದೆ. ಕ್ಷೇತ್ರದ ಘಟಾನುಘಟಿ ಮುಖಂಡರು ಮಾಲೀಕಯ್ಯ ಗುತ್ತೇದಾರ್‌ಗೆ ಕೈಕೊಟ್ಟು ಇವರ ಸಹೋದರ, ಪಕ್ಷೇತರ ಅಭ್ಯರ್ಥಿ ನಿತಿನ್ ಗುತ್ತೇದಾರ್ ಅವರನ್ನು ಬೆಂಬಲಿಸಿ ಮತಬೇಟೆ ಮಾಡುತ್ತಿದ್ದಾರೆ. ಶಿವರಾಜ ಸಜ್ಜನ್, ವಿಶ್ವನಾಥ್ ರೇವೂರ್, ರಾಜು ಜಿಡ್ಡಗಿ ಸೇರಿದಂತೆ ಹನ್ನೊಂದು ಪ್ರಮುಖ ಮುಖಂಡರು ಬಿಜೆಪಿ ಬದಲು ಪಕ್ಷೇತರ ಅಭ್ಯರ್ಥಿ ಸಪೋರ್ಟ್ ಮಾಡುತ್ತಿದ್ದಾರೆ. ಇದನ್ನರಿತ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಇವರೆಲ್ಲರನ್ನೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಹಿನ್ನೆಲೆಯಲ್ಲಿ 6 ವರ್ಷಗಳ ಕಾಲ ಉಚ್ಛಾಟಿಸಿ ಆದೇಶಿಸಿದೆ.
ಬಿಜೆಪಿ ಟಿಕೆಟ್ ಸಿಗದ ಕಾರಣ ಅಣ್ಣ ಮಾಲೀಕಯ್ಯಗೆ ಸೆಡ್ಡು ಹೊಡೆದಿರುವ ತಮ್ಮ ನಿತಿನ್ ಗುತ್ತೇದಾರ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಮುಖಂಡರಿಂದಲೇ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅಭ್ಯರ್ಥಿ ಮಾಲೀಕಯ್ಯಗೆ ಭಾರಿ ಹೊಡೆತ ಬೀಳುವ ಸಾಧ್ಯತೆ ಗೋಚರಿಸಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಗುತ್ತೇದಾರ್ ಸಹೋದರರ ಎಲೆಕ್ಷನ್ ಫೈಟ್ನಿಂದ ಅಫಜಲಪುರ ಕ್ಷೇತ್ರ ಹೈ ವೋಲ್ಟೇಜ್ ಕ್ಷೇತ್ರವಾಗಿ ಬದಲಾಗಿದೆ.
ಮಾಲೀಕಯ್ಯ ಗುತ್ತೇದಾರ್ ಕಳೆದ ಚುನಾವಣೆಯಲ್ಲಿ ಮುಂದಿನ ಅಭ್ಯರ್ಥಿ ನೀನೇ ಎಂದು ನಿತಿನ್ಗೆ ಹೇಳಿದ್ದರಂತೆ. ಆದ್ರೆ ಈ ಬಾರಿಯೂ ಕೊಟ್ಟ ಮಾತು ತಪ್ಪಿ ತಾವೇ ಸ್ಪರ್ಧೆಗೆ ಇಳಿದಿದ್ದಾರೆ ಅನ್ನೋದು ನಿತಿನ್ ಆರೋಪ. ಇದಕ್ಕೆ ಪ್ರತಿಯಾಗಿ ಇದು ನನ್ನ ಕೊನೆಯ ಚುನಾವಣೆ. ಕ್ಷೇತ್ರದ ಜನ ಒತ್ತಡ ಹಾಕ್ತಿದ್ದಾರೆ. ಹೀಗಾಗಿ ಕೊನೆಯದಾಗಿ ಸ್ಪರ್ಧೆ ಮಾಡ್ತಿದ್ದೇನೆ ಎಂದು ಮಾಲೀಕಯ್ಯ ಗುತ್ತೇದಾರ್ ಹೇಳಿದ್ದಾರೆ.
ನಿತಿನ್ ಗುತ್ತೇದಾರ್ ಮನವೊಲಿಸಲು ಮಾಲೀಕಯ್ಯ ಗುತ್ತೇದಾರ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದ್ರೆ ಇದಕ್ಕೆ ಸೊಪ್ಪು ಹಾಕದಿದ್ದಾಗ ಸಹೋದರ ಸವಾಲು ಏರ್ಪಟ್ಟಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಅಣ್ಣನ ಸಲುವಾಗಿ ಸದಾ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ನಿತಿನ್ ಸ್ಪರ್ಧೆ ಮಾಡಿರೋದು ಮಾಲಿಕಯ್ಯ ಗೆಲುವಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.
ಇದನ್ನೂ ಓದಿ: ಚುನಾವಣೆ ಬಂಡಾಯ: ಮಾಜಿ ಸಚಿವರು ಸೇರಿ 24 ಕೈ ನಾಯಕರಿಗೆ ಪಕ್ಷದಿಂದ ಗೇಟ್ ಪಾಸ್
ಕಾಂಗ್ರೆಸ್ನಿಂದ 24 ಕಾರ್ಯಕರ್ತರ ಉಚ್ಛಾಟನೆ: ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದ 24 ಮುಖಂಡರನ್ನು ಕಾಂಗ್ರೆಸ್ ಪಕ್ಷ ಉಚ್ಛಾಟನೆ ಮಾಡಿದೆ. ಟಿಕೆಟ್ ಕೈತಪ್ಪಿದ ಬಳಿಕ ಅಧಿಕೃತ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ತೊಡಗದೇ ಬಂಡಾಯವೆದ್ದು ಪಕ್ಷದ ವಿರುದ್ಧವೇ ಕಾರ್ಯನಿರ್ವಹಿಸುತ್ತಿದ್ದ ಕಾರ್ಯಕರ್ತರನ್ನು ಉಚ್ಛಾಟನೆ ಮಾಡಿ ಈ ಹಿಂದೆ ಆದೇಶಿಸಿತ್ತು.