ಕಲಬುರಗಿ: ಜಿಲ್ಲೆಯಲ್ಲಿ ಚುನಾವಣೆ ಕಾವು ರಂಗೇರುತ್ತಿದೆ. ನಿನ್ನೆ ನಾಮಪತ್ರ ಸಲ್ಲಿಸುವ ಕೊನೆ ದಿನವಾಗಿದ್ದು, ಇಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆದಿದೆ. ಆದ್ರೆ, ಕ್ಷುಲ್ಲಕ ವಿಷಯ ಇಟ್ಟುಕೊಂಡು ನಾಮಪತ್ರ ತಿರಸ್ಕೃತಗೊಳ್ಳುವಂತೆ ಕಾಂಗ್ರೆಸ್ನವರು ಮಾಡುತ್ತಿದ್ದಾರೆ ಎಂಬ ಆರೋಪವನ್ನು ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ ಮಾಡಿದ್ದಾರೆ.
ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿ ಆರ್ ವೆಂಕಟೇಶ್ ಕುಮಾರ್ ಸಮ್ಮುಖದಲ್ಲಿ, ಅಭ್ಯರ್ಥಿಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ನಾಮಪತ್ರ ಪರಿಶೀಲನೆ ಕಾರ್ಯ ನಡೆಯಿತು. ಆದರೆ ಬಿಜೆಪಿ ಅಭ್ಯರ್ಥಿ ಜಾದವ್ ನಾಮಪತ್ರದಲ್ಲಿ ಎರಡನೇ ಕಾಲಂ ಮಿಸ್ಸಿಂಗ್ ಆಗಿದೆ ಎಂದು ತಕರಾರು ಮಾಡಲಾಯಿತು. ಇನ್ನು ಗುಲ್ಬರ್ಗ ಲೋಕಸಭೆ ಎಸ್ಸಿ ಕ್ಷೇತ್ರಕ್ಕೆ ಒಟ್ಟು 21 ಅಭ್ಯರ್ಥಿಗಳು 39 ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಜಾತಿಪ್ರಮಾಣ ಪತ್ರದಲ್ಲಿ ಲಂಬಾಣಿ ಇದೆ ನಾಮಪತ್ರದಲ್ಲಿ ಬಂಜಾರ ಎಂದಿದೆ ಅಂತ ಕಾಂಗ್ರೆಸ್ ಬೆಂಬಲಿತರು ಪ್ರಶ್ನೆ ಮಾಡಿದ್ದರು. ಇದನ್ನು ಕೂಲಂಕಶವಾಗಿ ಪರಿಶೀಲನೆ ಮಾಡಿದ ಅಧಿಕಾರಿಗಳು, ನಾಮಪತ್ರ ಸ್ವೀಕೃತಗೊಳಿಸಿದರು. ಆದ್ರೆ ನಾಮಪತ್ರ ಪರಿಶೀಲನೆಗೂ ಮುನ್ನ ಬಿಜೆಪಿ ಅಭ್ಯರ್ಥಿಯ ನಾಮಪತ್ರದ ಪ್ರತಿ ಕಾಂಗ್ರೆಸ್ಕೈ ಸೇರಿದ್ದು ಹೇಗೆ ಎಂದು ಪ್ರಶ್ನಿಸಿ, ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತ ಪಡಿಸಿದರು.
ಈ ಬಗ್ಗೆ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ನಾಮಪತ್ರ ಸಲ್ಲಿಸುವ ವೇಳೆ ನಾನಲ್ಲಿರಲಿಲ್ಲ, 21 ಜನ ನಾಮಪತ್ರ ಸಲ್ಲಿಸಿದ್ದಾರೆ. ಇವರೊಬ್ಬರಲ್ಲ, ಯಾರಿಗೂ ತೊಂದರೆ ಕೊಡುವ ಕೆಲಸ ಕಾಂಗ್ರೆಸ್ ಸಿದ್ದಾಂತದಲ್ಲಿ ಇಲ್ಲ, ಪಕ್ಷದ ಶಿಸ್ತುಬದ್ದ ಸಿದ್ದಾಂತದಲ್ಲಿ ಚುನಾವಣೆ ಎದಿರುಸುತ್ತಿದ್ದೇವೆ. ಬಿಜೆಪಿಯವರು ದೇಶಕ್ಕಾಗಿ ಏನು ಕೊಡುಗೆ ಕೊಟ್ಟಿದ್ದಾರೆ, ಕಾಂಗ್ರೆಸ್ ಏನು ಕೊಟ್ಟಿದೆ ಜನರ ಮುಂದೆ ಇಟ್ಟು ಚುನಾವಣೆ ಮಾಡುತ್ತೆವೆ ಹೊರತಾಗಿ ಕ್ಷುಲ್ಲಕ ರಾಜಕಾರಣ ನಮ್ಮದಲ್ಲ ಎಂದು ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಸದ್ಯ ಚುನಾವಣೆಯ ರಣಕಣದಲ್ಲಿ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ. ರ್ಯಾಲಿ ಮಾಡುವ ಮೂಲಕ ಎರಡು ಪಕ್ಷಗಳು ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದು, ಇದೀಗ ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿಸಿಕೊಂಡಿದ್ದಾರೆ.