ಕಲಬುರಗಿ : ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದಲ್ಲಿ ಕೊರೊನಾದಿಂದಾಗಿ ಸಾವಿನ ಸರಣಿ ಮುಂದುವರೆದಿದೆ. ಗ್ರಾಮಸ್ಥರು ಸ್ವಯಂಘೋಷಿತ ಲಾಕ್‌ಡೌನ್ ಮುಂದುವರೆಸಿದ್ದಾರೆ.
ಕಳೆದ ಮೂರು ವಾರದಿಂದ ಗ್ರಾಮದಲ್ಲಿ ಮೃತರ ಸಂಖ್ಯೆ ಏರುತ್ತಲೇ ಹೊರಟಿದೆ. ಈಗಾಗಲೇ ತಿಂಗಳ ಅಂತರದಲ್ಲಿ ಸುಮಾರು 15 ಜನ ಮೃತಪಟ್ಟಿದ್ದಾರೆ. ಇವರಲ್ಲಿ ಕೆಲವರು ಸೋಂಕಿನಿಂದ ಮೃತಪಟ್ಟಿದ್ದೆಂದು ದೃಢಪಟ್ಟಿದೆ. ಇದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಕಳೆದ ಎರಡು ವಾರಗಳಿಂದ ಸ್ವಯಂಘೋಷಿತ ಲಾಕ್‌ಡೌನ್ ಗ್ರಾಮದಲ್ಲಿ ಕಂಡು ಬರುತ್ತಿದೆ. ವ್ಯಾಪಾರ, ವಹಿವಾಟು ಸ್ಥಗಿತಗೊಂಡಿದೆ. ಸಾರ್ವಜನಿಕರ ಓಡಾಟ ವಿರಳವಾಗಿದೆ. ಕಳೆದ ವರ್ಷ ಲಾಕ್‌ಡೌನ್ ಸಂದರ್ಭದಲ್ಲಿ ಪೊಲೀಸರ ಏಟಿಗೂ ಹೆದರದೆ ಹೊರಗಿರುತ್ತಿದ್ದ ಜನ ಈಗ ಸ್ವಯಂಪ್ರೇರಿತರಾಗಿ ಮನೆಯಲ್ಲಿಯೇ ಇರುತ್ತಿದ್ದಾರೆ. ಅಕ್ಕಪಕ್ಕದ ಗ್ರಾಮಸ್ಥರು ಬಂದರವಾಡ ಗ್ರಾಮದತ್ತ ಸುಳಿಯುತ್ತಿಲ್ಲ. ಎರಡು ವಾರದಿಂದ ಗ್ರಾಮದಲ್ಲಿ ಸಂತೆ ಕೂಡ ನಡೆದಿಲ್ಲ.
ಕೊರೊನಾ ಸೋಂಕು ಬಂದರವಾಡ ಗ್ರಾಮಸ್ಥರ ಎದೆಬಡಿತ ಹೆಚ್ಚು ಮಾಡಿದೆ. ಗ್ರಾಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕಾಲಕಾಲಕ್ಕೆ ಅಗತ್ಯ ಕ್ರಮಕೈಗೊಳ್ಳುತ್ತಿದ್ದಾರೆ. ಗ್ರಾಮಸ್ಥರು ದೈವಶಕ್ತಿಯ ಮೊರೆಯೂ ಹೋಗಿದ್ದು, ಪೂಜೆ-ಪುನಸ್ಕಾರ ಮಾಡುತ್ತಿದ್ದಾರೆ.
ಓದಿ: 15 ದಿನದಲ್ಲಿ 10 ಮಂದಿ ಕೋವಿಡ್ಗೆ ಬಲಿ.. ಬಂದರವಾಡ ಗ್ರಾಮ ಸೀಲ್ಡೌನ್