ಸೇಡಂ: ಇತ್ತೀಚೆಗೆ ತೆರೆಯಲಾಗಿದ್ದ ಖಾಸಗಿ ಕೋವಿಡ್ ಕೇರ್ ಆಸ್ಪತ್ರೆಯ ಮೇಲೆ ದಾಳಿ ಮಾಡಿ ವೈದ್ಯರ ಮೇಲೆ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಗುಂಡೇಪಲ್ಲಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಇತ್ತೀಚೆಗೆ ಹೈದ್ರಾಬಾದ್ನ ವಿ.ಜಿ ಆಸ್ಪತ್ರೆಯ ನೇತೃತ್ವದಲ್ಲಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅಭಿಮಾನಿ ಬಳಗದ ವತಿಯಿಂದ ಕೋವಿಡ್ ಕೇರ್ ಆಸ್ಪತ್ರೆ ಪ್ರಾರಂಭಿಸಲಾಗಿತ್ತು. ಆದರೆ ನಿನ್ನೆ ರಾತ್ರಿ ನೂರಾರು ಪುರುಷರು ಮತ್ತು ಮಹಿಳೆಯರು ಸೇರಿ ಕೋವಿಡ್ ಆಸ್ಪತ್ರೆಯ ಮೇಲೆ ದಾಳಿ ನಡೆಸಿ ಇಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಬೇಡಿ ಎಂದು ದಾಂಧಲೆ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನು ಒದಿ: ತುಘಲಕ್ ಸರ್ಕಾರ ಮತ್ತೊಮ್ಮೆ ಅವಾಸ್ತವಿಕ ಲಾಕ್ಡೌನ್ ಜಾರಿಗೆ ಮಾಡಿದೆ: ಸಿದ್ದರಾಮಯ್ಯ
ಅಲ್ಲದೆ ಕಲ್ಲು, ಕಟ್ಟಿಗೆ ಹಿಡಿದುಕೊಂಡು ವೈದ್ಯರನ್ನು ಅಟ್ಟಾಡಿಸಿ ಹಲ್ಲೆ ನಡೆಸಿರುವ ಗಂಭೀರ ಆರೋಪ ಕೇಳಿ ಬಂದಿದೆ. ನಮ್ಮ ಗ್ರಾಮದಲ್ಲಿ ಕೋವಿಡ್ ಕೇರ್ ಸೆಂಟರ್ ಬೇಡವೇ ಬೇಡ ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ವೈದ್ಯ ಡಾ. ಪ್ರಭಾಂಜನ್, ಡಾ. ಸುರೇಶಬಾಬು ಎಂಬುವವರಿಗೆ ಗಾಯಗಳಾಗಿವೆ. ಸ್ಥಳಕ್ಕೆ ಮುಧೋಳ ಪೊಲೀಸರು, ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಭೇಡಿ ನೀಡಿ ಶಾಂತಿ ಸಭೆ ನಡೆಸಿದ್ದಾರೆ. ಘಟನೆ ಸಂಬಂಧ ಮುಧೋಳ ಠಾಣೆಯಲ್ಲಿ 15 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.