ಕಲಬುರಗಿ: ಕೇವಲ ಎರಡು ಸಾವಿರ ರೂಪಾಯಿಗಾಗಿ ತಮ್ಮ ಬಾಲ್ಯದ ಸ್ನೇಹಿತನ್ನೆ ಕೊಂದ ಅಮಾನವಿಯ ಘಟನೆ ನಗರದಲ್ಲಿ ನಡೆದಿದೆ.
ಸ್ನೇಹ ಎಂದರೆ ಜೀವಕ್ಕೆ ಜೀವಕೊಡೋ ಜನರ ನಡುವೆ ನಗರದಲ್ಲಿ ನಾಲ್ಕು ಜನ ಗೆಳೆಯರು ಎರಡು ಸಾವಿರ ರೂಪಾಯಿ ಮರಳಿ ನೀಡದಕ್ಕೆ ತಮ್ಮ ಬಾಲ್ಯದ ಸ್ನೇಹಿತನನ್ನೆ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ಅಬ್ದುಲ್ ನೌಶಾದ್(40) ಎಂದು ಗುರುತಿಸಲಾಗಿದೆ. ಅಬ್ದುಲ್ ನೌಶಾದ್ ಸೈಯದ್ ಗಲ್ಲಿಯ ನಿವಾಸಿಯಾಗಿದ್ದಾನೆ. ಹಣದ ವಿಚಾರವಾಗಿ ಸ್ನೇಹಿತರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಆತನ ಸ್ನೇಹಿತರು ತಡರಾತ್ರಿ ಕರೆ ಮಾಡಿ, ಮನೆಯಿಂದ ಹೊರಗಡೆ ಬರುವಂತೆ ಹೇಳಿದ್ದಾರೆ. ಸ್ನೇಹಿತರು ಕರೆದಿದ್ದರಿಂದ ಮನೆಯಿಂದ ಆಚೆ ಬಂದ ನೌಶಾದ್, ಬೆಳಗಾಗುವಷ್ಟರಲ್ಲಿ ಹೆಣವಾಗಿ ಹೋಗಿದ್ದ.
ಇಬ್ಬರ ಬಂಧನ, ಇನ್ನಿಬ್ಬರಿಗಾಗಿ ಹುಡುಕಾಟ : ಈ ಕುರಿತು ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಮಾಹಿತಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಹಣಕಾಸಿನ ವ್ಯವಹಾರದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಸುಳಿವು ಸಿಕ್ಕಿದೆ. ಕೊಡಲೆ ಕಾರ್ಯ ಪ್ರವೃತ್ತರಾದ ಪೊಲೀಸರು ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಡಿಸಿಪಿ ಕಿಶೋರ್ ಬಾಬು ಮಾಹಿತಿ ನೀಡಿದ್ದಾರೆ.