ಕಲಬುರಗಿ: ವನ್ಯಜೀವಿ ಸಂರಕ್ಷಣೆ ಕಾಯ್ದೆ ಅಡಿ ವನ್ಯ ಪ್ರಾಣಿಗಳ ಚರ್ಮ, ದಂತ, ಕೊಂಬು ಸಂಗ್ರಹ ಅಥವಾ ಸಾಗಾಣಿಕೆಗೆ ಅವಕಾಶ ಇಲ್ಲ. ಅದು ಶಿಕ್ಷಾರ್ಹ ಅಪರಾಧವಾಗಿದೆ. ಅಂತಹ ಯಾವುದೇ ಪ್ರಕರಣಗಳಲ್ಲಿ ಭಾಗಿಯಾದರೆ, ಅವರ ಹಿಂದೆ ಎಂತಹ ಪ್ರಭಾವಿಗಳಿದ್ದರೂ ಬಿಡುವುದಿಲ್ಲ. ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಇತ್ತೀಚೆಗೆ ಹುಲಿ ಉಗುರು ಧರಿಸಿರುವ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಕಲಬುರಗಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವರು ಹುಲಿ ಉಗುರು ಪದಕಗಳನ್ನು ಕೊರಳಲ್ಲಿ ಧರಿಸುವುದು ಬೆಳಕಿಗೆ ಬಂದಿದೆ. ಇನ್ನೂ ಕೆಲವರು ಹುಲಿ ಚರ್ಮಗಳನ್ನು ಮನೆಗಳಲ್ಲಿ ಶೇಖರಣೆ ಮಾಡುತ್ತಿರುವಂತಹ ದೂರುಗಳು ಬರುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ದೂರಿನ ಅನ್ವಯ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಈ ನೆಲದ ಕಾನೂನು ಎಲ್ಲರಿಗೂ ಒಂದೇ ಆಗಿರುತ್ತದೆ. ಎಂತಹ ದೊಡ್ಡವರು, ಪ್ರಭಾವಿಗಳೇ ಆದರೂ, ಅಂತಹ ಪ್ರಕರಣಗಳಲ್ಲಿ ಭಾಗಿಯಾದವರ ವಿರುದ್ಧ ಇಲಾಖೆ ಕ್ರಮ ಕೈಗೊಳ್ಳಲಿದೆ. ಯಾರ ವಿರುದ್ಧ ದೂರು ದಾಖಲಾಗಿವೆಯೋ ಅವರ ವಿರುದ್ಧ ಈಗಾಗಲೇ ತನಿಖೆ ಪ್ರಾರಂಭಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
1972 ಜಾರಿಗೆ ಬಂದಿರುವ ವನ್ಯಜೀವಿ ಸಂರಕ್ಷಣಾ ಕಾಯ್ದೆ ಇದೆ. ನಂತರ ಕೆಲವು ವರ್ಷಗಳಲ್ಲಿ ಕಾಯ್ದೆಗೆ ಕೆಲವು ತಿದ್ದಪಡಿಗಳನ್ನೂ ತರಲಾಗಿದೆ. ಈ ಕಾಯ್ದೆಯ ಅಡಿಯಲ್ಲಿ ಹುಲಿ ಚರ್ಮ, ಉಗುರು, ಆನೆ ದಂತ, ಜಿಂಕೆ ಚರ್ಮ, ಕೊಂಬು ಇಂತಹ ಯಾವುದನ್ನೇ ಸಾಗಣೆ, ಬಳಕೆ, ಮನೆಯಲ್ಲಿ ಇರಿಸುವುದಕ್ಕೆ, ಮಾರಾಟ ಮಾಡುವುದಕ್ಕೆ ಅವಕಾಶ ಇಲ್ಲ. ಒಂದು ವೇಳೆ ಮಾಡಿದ್ದಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಆಯಾ ಭಾಗದಲ್ಲಿ ಯಾರ ಮೇಲೆ ದೂರುಗಳು ಬರುತ್ತವೆಯೋ, ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಬಿಗ್ ಬಾಸ್ ಸ್ಪರ್ಧಿ ಬಂಧನ: ಇಂತಹದೇ ಹುಲಿ ಉಗುರಿನ ಡಾಲರ್ ಕೊರಳಲ್ಲಿ ಧರಿಸಿರುವ ಆರೋಪದಡಿ ಕನ್ನಡ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಬಿಗ್ ಮನೆಯಿಂದಲೇ ರಾತ್ರೋರಾತ್ರಿ ಅರಣ್ಯಾಧಿಕಾರಿಗಳು ಬಂಧಿಸಿದ್ದರು. ವ್ಯಕ್ತಿಯೊಬ್ಬರು ನೀಡಿದ್ದ ದೂರಿನ ಆಧಾರದ ಮೇರೆಗೆ ಬಿಗ್ ಬಾಸ್ ರಿಯಾಲಿಟಿ ಶೋ ನಡೆಯುತ್ತಿದ್ದ ಮನೆಗೆ ಭಾನುವಾರ ರಾತ್ರಿ ತೆರಳಿದ್ದ ಅರಣ್ಯಾಧಿಕಾರಿಗಳು ವರ್ತೂರು ಸಂತೋಷ್ ಅವರನ್ನು ವಶಕ್ಕೆ ಪಡೆದಿದ್ದರು.
ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆಯ ಪ್ರಕರಣ ದಾಖಲಾಗಿದ್ದು, ಡಾಲರ್ ಜಪ್ತಿ ಮಾಡಿಕೊಂಡಿದ್ದ ಅರಣ್ಯಾಧಿಕಾರಿಗಳು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಇದೀಗ ವರ್ತೂರು ಸಂತೋಷ್ 14 ದಿನದ ನ್ಯಾಯಾಂಗ ಬಂಧನದಲ್ಲಿದ್ದಾರೆ.
ನಟ ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ: ನಟ ಹಾಗೂ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಕೂಡ ತಮ್ಮ ಮದುವೆಯಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ತಮ್ಮ ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿರುವ ನಿಖಿಲ್ ಕುಮಾರಸ್ವಾಮಿ, "ಇದು ಸತ್ಯಕ್ಕೆ ದೂರವಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ, ಅದರ ಗಂಭೀರತೆ ಬಗ್ಗೆ ನನಗೆ ಖಂಡಿತಾ ಅರಿವಿದೆ. ನಾಣು ಧರಿಸಿದ್ದ ಹುಲಿ ಉಗುರು ಮಾದರಿಯ ಪೆಂಡೆಂಟ್ ಕೃತಕವಾದದ್ದೇ ಹೊರತು ನೈಜವಾದದ್ದಲ್ಲ. ಅದು ನನ್ನ ಮದುವೆ ಸಮಯದಲ್ಲಿ ಉಡುಗೊರೆ ನೀಡಿದ್ದು. ಅದು ಇನ್ನೂ ನನ್ನ ಬಳಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬಹುದು" ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬಿಗ್ ಬಾಸ್ ಮನೆಯಿಂದಲೇ ವರ್ತೂರು ಸಂತೋಷ್ ಅರೆಸ್ಟ್.. ಕಾರಣವೇನು?