ಕಲಬುರಗಿ:ರೈತರು ಸೇರಿದಂತೆ ಜನರು ಮಹಾರಾಷ್ಟ್ರ ಸರ್ಕಾರ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಮೈತ್ರಿಗೆ ಮಹಾರಾಷ್ಟ್ರದಲ್ಲಿ ಉತ್ತಮ ವಾತಾವರಣ ಇದ್ದು,ಮೈತ್ರಿ ಪಕ್ಷಗಳು ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದು ಮಹಾರಾಷ್ಟ್ರ ಚುನಾವಣಾ ಕಾಂಗ್ರೆಸ್ ಉಸ್ತುವಾರಿ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಇಂದು ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಕಲಬುರಗಿಗೆ ಖರ್ಗೆ ಮರಳಿದ್ದಾರೆ. ಎನ್‌ಸಿಪಿ, ಕಾಂಗ್ರೆಸ್, ಸಿಪಿಎಂ ಎಲ್ಲರೂ ಒಗ್ಗೂಡಿ ಚುನಾವಣೆ ಎದುರಿಸುತ್ತಿದ್ದೇವೆ.ಸಾಧ್ಯವಾದಷ್ಟು ಪ್ರಮುಖ ಸ್ಥಳದಲ್ಲಿ ಪ್ರಚಾರ ಮಾಡಿದ್ದು,ಈ ಬಾರಿ ಮೈತ್ರಿ ಸರ್ಕಾರ ಬರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದರು.
ಟಿವಿ ಚಾನೆಲ್ ಸಮೀಕ್ಷೆ ಪೊಳ್ಳು:
ಒಪಿನಿಯನ್ ಪೋಲ್‌ನಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ಬಂದಿರುವಂತೆ ತೋರಿಸುತ್ತಿದ್ದಾರೆ. ಅನೇಕ ಉದ್ಯೋಗಪತಿಗಳು ಚಾನೆಲ್‌ಗಳನ್ನು ನಡೆಸುತ್ತಿದ್ದಾರೆ.ಅಪ್ರತ್ಯಕ್ಷವಾಗಿ ಕೆಲವು ಮಾಧ್ಯಮಗಳನ್ನು ಕೇಂದ್ರ ಕಂಟ್ರೋಲ್‌ನಲ್ಲಿ ಇಟ್ಟುಕೊಂಡಿದೆ. ಅದಕ್ಕೆ ಅವರು ಬಿಜೆಪಿಗೆ ಹೆಚ್ಚಿನ ಸ್ಥಾನ ತೋರಿಸುತ್ತಿದ್ದಾರೆ ಎಂದರು.
ಇನ್ನು ಮುಂಬೈ ಸುತ್ತಮುತ್ತ ಹಾಗೂ ಮಹಾರಾಷ್ಟ್ರದಲ್ಲಿ 2200 ಉದ್ಯಮಗಳು ಮುಚ್ಚಿಹೋಗಿವೆ. ಐದು ವರ್ಷಗಳಲ್ಲಿ ಫಡ್ನವಿಸ್ ಸರ್ಕಾರ ಯಾವುದೇ ಸಾಧನೆ ಮಾಡಿಲ್ಲ, ಹೀಗಾಗಿ ಸರ್ಕಾರದ ಸಾಧನೆ ಬಗ್ಗೆ ಕೇಳಿದ್ರೆ ಉತ್ತರ ಕೊಡ್ತಿಲ್ಲ ಬದಲಾಗಿ 370 ರದ್ ಕಿಯಾ, ಓ ಕಿಯಾ ಅಂತಾ ಎಲ್ಲಾ ಹೇಳ್ತಾರೆ.ರಾಷ್ಟ್ರೀಯ ವಿಷಯದ ಮೇಲೆ ಚುನಾವಣೆ ಮಾಡ್ತಾರೆ, ರಾಜ್ಯದಲ್ಲಿ ಏನು ಮಾಡಿದ್ದಾರೆ ಎಂದು ಹೇಳಲು ಅವರಿಗೆ ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.