ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಐನೊಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಹಿನ್ನೆಲೆ ಬಿಜೆಪಿ ಬೆಂಬಲಿತ ನಾಲ್ವರು ಗ್ರಾಮ ಪಂಚಾಯಿತಿ ಸದಸ್ಯರನ್ನು ಕಾಂಗ್ರೆಸ್ ಕಾರ್ಯಕರ್ತರು ಕಿಡ್ನ್ಯಾಪ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ವಿಚಾರವಾಗಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೆವಾಡಗಿ ಘಟನೆಯನ್ನು ಬಲವಾಗಿ ಖಂಡಿಸಿ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ.
ಐನೊಳ್ಳಿ ಗ್ರಾಮ ಪಂಚಾಯಿತಿಯಲ್ಲಿ 18 ಸದಸ್ಯರಿದ್ದು, ಬಿಜೆಪಿ ಬೆಂಬಲಿತ 11 ಸದಸ್ಯರು ಕಳೆದ ಜುಲೈ 13ರಂದು ಮಹಾರಾಷ್ಟ್ರದ ಪುಣೆಗೆ ಪ್ರವಾಸಕ್ಕೆ ತೆರಳಿ ಖಾಸಗಿ ಹೋಟೆಲ್ನಲ್ಲಿ ತಂಗಿದ್ದರು. ಅದರಲ್ಲಿ 6 ಜನ ಸದಸ್ಯರು ಶುಕ್ರವಾರ ಪುಣೆಯ ಲಾಡ್ಜ್‌ವೊಂದರಲ್ಲಿ ತಂಗಿದ್ದರು. ರಾತ್ರಿ ವೇಳೆ 10ಕ್ಕೂ ಹೆಚ್ಚು ಜನ ಮಾರಕಾಸ್ತ್ರ ಹಿಡಿದು ಲಾಡ್ಜ್‌ಗೆ ನುಗ್ಗಿ ಎಲ್ಲ ಸದಸ್ಯರನ್ನು ಅಪಹರಿಸಿದ್ದಾರೆ. ಬಳಿಕ ಶಶೇಂದ್ರ ಕುಮಾರ್ ಮತ್ತು ಶೇಖ್ ಭಕ್ತಿಯಾರ್ ಜಾಗೀರ್ದಾರ್ ಎಂಬವರನ್ನು ಪುಣೆಯ ಹೈವೇಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ರದ್ದೆವಾಡಗಿ ಆರೋಪಿಸಿದರು.
ಪ್ರಕರಣ ದಾಖಲು: ಆ.7ರಂದು(ಇಂದು) ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಯಲಿದ್ದು, ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಪರಿಶಿಷ್ಟ ಜಾತಿಯ ಮಹಿಳೆಯರ ನಡುವೆ ಜಿದ್ದಾಜಿದ್ದಿ ಶುರುವಾಗಿದೆ. ಅದರಂತೆ ಅಧ್ಯಕ್ಷರಾಗಲು 10 ಸದಸ್ಯರ ಬೆಂಬಲ ಬೇಕಾಗಿದೆ. ಆದರೆ, ಈಗಾಗಲೇ ಬಿಜೆಪಿ ಬೆಂಬಲಿತ ಒಟ್ಟು 11 ಸದಸ್ಯರಿರುವ ಹಿನ್ನೆಲೆ ಪ್ರವಾಸಕ್ಕೆ ಹೋಗಿದ್ದ 11ಬಿಜೆಪಿ ಬೆಂಬಲಿತ ಸದಸ್ಯರಲ್ಲಿ ನಾಲ್ವರನ್ನು ಕಾಂಗ್ರೆಸ್ನವರು ಅಪಹರಿಸಿದ್ದಾರೆ ಎಂದು ಈಗಾಗಲೇ ಪುಣೆಯ ಚಿಕ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಗುಂಡಾ ಪ್ರವೃತ್ತಿ ಹೆಚ್ಚಾಗಿದೆ. ಅಕ್ರಮವಾಗಿ ಗದ್ದುಗೆ ಹಿಡಿಯಲು ಹವಣಿಸುತ್ತಿದೆ. ಸಂವಿಧಾನ ಬದ್ದವಾಗಿ ಜನಪ್ರತಿನಿಧಿ ಆಯ್ಕೆ ಮಾಡುವ ವ್ಯವಸ್ಥೆಯಲ್ಲಿರುವ ನಮ್ಮ ದೇಶದಲ್ಲಿ ಕಾಂಗ್ರೆಸ್ ದುರ್ಮಾರ್ಗಳಿಂದ ಗದ್ದುಗೆ ಹಿಡಿಯುವ ಪ್ರಯತ್ನ ಮಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಿರಂತರ ದೌರ್ಜನ್ಯ ನಡೆದಿವೆ ಎಂದು ರದ್ದೆವಾಡಗಿ ಆರೋಪ ಮಾಡಿದರು.
ಕಾಂಗ್ರೆಸ್‌ನ ಇಂತಹ ದೌರ್ಜನ್ಯ, ರೌಡಿಸಂಗೆ ನಾವು ಹೆದರುವುದಿಲ್ಲ. ನಮಗೆ ಸಂವಿಧಾನದ ಮೇಲೆ ನಂಬಿಕೆ ಇದೆ. ಕಾಂಗ್ರೆಸ್‌ನ ಇಂತಹ ನಡೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಕೂಡಲೇ ಜಿಲ್ಲಾಡಳಿತ ಮಧ್ಯೆ ಪ್ರವೇಶ ಮಾಡಬೇಕು. ಚಿಂಚೋಳಿಯಲ್ಲಿ ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆ. ಆ.7 ರಂದು ನಡೆಯುವ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ಬೇರೆಡೆಯ ಪೊಲೀಸ್ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕು. ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸಬೇಕು. ಅಪಹರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆದು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಗ್ರಾಪಂ ಸದಸ್ಯೆಯ ಕಿಡ್ನ್ಯಾಪ್ ಯತ್ನ ಆರೋಪ: ಗ್ರಾಪಂ ಅಧ್ಯಕ್ಷ ಚುನಾವಣೆ ಹಿನ್ನೆಲೆ ಸಿನಿಮಿಯ ರೀತಿಯಲ್ಲಿ ಗ್ರಾಪಂ ಸದಸ್ಯೆಯೊಬ್ಬರನ್ನು ಅಪಹರಣಕ್ಕೆ ಯತ್ನಿಸಿದ ಘಟನೆ ಸಿಂದಗಿ ಬಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ಪ್ರಕರಣ ಸಂಬಂಧ ದೂರು, ಪ್ರತಿ ದೂರು ದಾಖಲಾಗಿತ್ತು.
ಇದನ್ನೂ ಓದಿ: ಗ್ರಾಪಂ ಸದಸ್ಯೆಯ ಕಿಡ್ನ್ಯಾಪ್ ಯತ್ನ ಆರೋಪ.. ದೂರು, ಪ್ರತಿ ದೂರು ದಾಖಲು!