ಕಲಬುರಗಿ: ಮಹಾನಗರ ಪಾಲಿಕೆಯಲ್ಲಿ ಅವಸರವಾಗಿ ಯಾವುದೇ ಪೂರ್ವ ತಯಾರಿ ಇಲ್ಲದೆ ಭಾಗವಹಿಸಿದ್ದೇವೆ. ಚುನಾವಣೆಯಲ್ಲಿ ದೊಡ್ಡ ಪ್ರಮಾಣದ ಅಭಿಯಾನ ಕೈಗೊಳ್ಳದಿದ್ದರೂ ನಮ್ಮ ಪಕ್ಷಕ್ಕೆ ಕಲಬುರಗಿ ಉತ್ತರ ಮತಕೇತ್ರದಲ್ಲಿ 10 ಸಾವಿರಕ್ಕೂ ಹೆಚ್ಚು ಮತಗಳು ಸಿಕ್ಕಿವೆ. ಇದು ನಮ್ಮ ಪಕ್ಷದ ದೊಡ್ಡ ಯಶಸ್ಸಾಗಿದೆ ಎಂದು ಎಐಎಂಐಎಂ(AIMIM) ಸಂಸ್ಥಾಪಕ ಅಸಾದುದ್ದೀನ್ ಓವೈಸಿ ಅವರು ಹರ್ಷ ವ್ಯಕ್ತಪಡಿಸಿದರು.
ಇಂದು ನಗರದ ಮೆಟ್ರೋ ಫಂಕ್ಷನ್ ಹಾಲ್ನಲ್ಲಿ ಪಕ್ಷದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸ್ಥಳೀಯ ರಾಜಕೀಯ ಪಕ್ಷಗಳು ಮತ್ತು ಹಿರಿಯ ದೊಡ್ಡ ಬೇರುಗಳ ನಡುವೆ ಪಕ್ಷಕ್ಕೆ ಅಭೂತಪೂರ್ವ ಮತಗಳನ್ನು ನೀಡಿ ಇಲ್ಲಿನ ಜನತೆ ಬೆಂಬಲ ಸೂಚಿಸಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿಂದ ನಮ್ಮ ಪಕ್ಷದ ಅಭ್ಯರ್ಥಿ ಜನರ ಸಮಸ್ಯೆಗಳಿಗೆ ಧ್ವನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಕಾಂಗ್ರೆಸ್ ಪಕ್ಷವನ್ನೇ ಮಾತ್ರ ಟಾರ್ಗೆಟ್ ಮಾಡುವುದಾಗಿ ಆರೋಪ ಮಾಡಲಾಗುತ್ತಿದೆ. ಲೋಕಸಭೆಯಲ್ಲಿ ನಾನು ಮತ್ತು ನಮ್ಮ ಪಕ್ಷದ ಸಂಸದ ಇಮ್ತಿಯಾಜ್ ಜಲೀಲ್ ಬಿಜೆಪಿ ವಿರುದ್ಧ ಅತಿಹೆಚ್ಚು ಟೀಕೆ ಮಾಡುವವರಾಗಿದ್ದೇವೆ ಎಂದರು.
ಸಾವರ್ಕರ್ಗೆ ಮಹಾತ್ಮ ಗಾಂಧಿ ಕ್ಷಮಾಪಣೆ ಕೇಳಲು ಹೇಳಿದರು ಎಂಬ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆ ಕುರಿತು ಮಾತನಾಡಿ, ಅವರು ಯಾರ ಒತ್ತಾಯಕ್ಕೆ ಮಣಿದು ಸುಳ್ಳು ಹೇಳಿದ್ದಾರೆ. ಸೌತ್ ಆಫ್ರಿಕಾದಿಂದ ಗಾಂಧೀಜಿ ಭಾರತಕ್ಕೆ ಬರುವ ಮುಂಚೆಯೇ ಬ್ರಿಟಿಷರಿಗೆ ಎರಡು ಬಾರಿ ಸಾವರ್ಕರ್ ಕ್ಷಮಾಪಣೆ ಪತ್ರ ಬರೆದಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ವಿಧಾನಸಭೆ ಭಾವಿ ಅಭ್ಯರ್ಥಿ ಇಲಿಯಾಜ್ ಸೇಠ್ ಬಾಗಬಾನ್, ಎಐಎಂಐಎಂ ಪಕ್ಷದ ಜಿಲ್ಲಾ ಅಧ್ಯಕ್ಷ ಇಕ್ಬಾಲ್ ಅಹ್ಮದ್ ಸಿನ್ನಿಫರೋಶ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಓದಿ: ಡಿ.ಕೆ.ಶಿವಕುಮಾರ್ಗೆ ಇಂತಹ ಪ್ರಕರಣಗಳು ಹೊಸದೇನಲ್ಲ: ಕೇಂದ್ರ ಸಚಿವೆ ಕರಂದ್ಲಾಜೆ