ಕಲಬುರಗಿ: ಜೇವರ್ಗಿ ಹಾಗೂ ಅಫಜಲಪುರ ತಾಲೂಕಿನ ಕೇಲ ಗ್ರಾಮ ಪಂಚಾಯಿತಿಗಳಲ್ಲಿ ಅವ್ಯವಹಾರ, ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ನಾಲ್ವರು ಪಿಡಿಒಗಳು, ಇಬ್ಬರು ಜೆಇಗಳನ್ನು ಸೇವೆಯಿಂದ ಅಮಾನತು ಸೇರಿದಂತೆ ಒಟ್ಟು 9 ಮಂದಿ ಸರಕಾರಿ ನೌಕರರ ಮೇಲೆ ಜಿಲ್ಲಾ ಪಂಚಾಯಿತಿ ಸಿಇಒ ಡಾ. ಗಿರೀಶ್ ಬದೋಲೆ ಕಠಿಣ ಕ್ರಮ ಕೈಗೊಂಡಿದ್ದಾರೆ.
ಆರು ಮಂದಿ ಅಧಿಕಾರಿಗಳ ಅಮಾನತು: ಕೂಡಿ ಗ್ರಾಮ ಪಂಚಾಯಿತಿಯ ಹಿಂದಿನ ಪಿಡಿಒಗಳಾದ ಹಾಗೂ ಸದ್ಯ ಹಿಪ್ಪರಗಾ ಎಸ್.ಎನ್ ಗ್ರಾಮ ಪಂಚಾಯಿತಿ ಪಿಡಿಒ ಆಗಿರುವ ಬಸವಂತರಾಯ ಪಾಟೀಲ, ಸದ್ಯ ಆಂದೋಲಾ ಪಿಡಿಒ ಆಗಿರುವ ಶ್ರೀಕಾಂತ ದೊಡ್ಡನಿ, ಕೂಡಿ ಗ್ರಾಮ ಪಂಚಾಯತ್ ಗ್ರೇಡ್-2 ಕಾರ್ಯದರ್ಶಿ ಸದ್ಯ ಯಾಳವಾರ ಗ್ರಾಮ ಪಂಚಾಯಿತಿಯ ಪ್ರಭಾರ ಪಿಡಿಒ ಆಗಿರುವ ಸುಭಾಶ್ಚಂದ್ರ, ಈ ಹಿಂದೆ ನರಿಬೋಳ ಗ್ರಾಮ ಪಂಚಾಯಿತಿಯ ಪಿಡಿಒ ಆಗಿದ್ದ ಸದ್ಯ ಹರವಾಳ ಪಿಡಿಒ ಆಗಿರುವ ಈರಯ್ಯ ಮಠಪತಿ ಮತ್ತು ಜೇವರ್ಗಿಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಕಿರಿಯ ಇಂಜಿನಿಯರ್ ಗಳಾದ ದೇವಣ್ಣ ಕಟ್ಟಿ ಹಾಗೂ ಅನಿಲಕುಮಾರ್ ಸೇರಿ ಒಟ್ಟು ಆರು ಜನ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ನರಿಬೋಳ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಮಲ್ಟಿ ಆರ್ಚ್ ಚಕ್ ಡ್ಯಾಂ ನಿರ್ಮಾಣ ಮಾಡದೇ 41,905 ಕೂಲಿ ಹಾಗೂ 74.93 ಲಕ್ಷದ ಕಾಮಗಾರಿ ಹಣವನ್ನ ದುರ್ಬಳಕೆ ಮಾಡಿಕೊಂಡಿರುವುದು ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ ಕಿರಿಯ ಎಂಜಿನಿಯರ್‌ಗಳಾದ ದೇವಣ್ಣ ಕಟ್ಟಿ ಹಾಗೂ ಅನಿಲ್‌ಕುಮಾರ್ ಇಬ್ಬರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಅನಿಲ್‌ಕುಮಾರ್ ಸದ್ಯ ತುಮಕೂರು ಜಿಲ್ಲೆಯ ಪಾವಗಡ ಉಪವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನು ಯಾಳವಾರ ಗ್ರಾಮ ಪಂಚಾಯಿತಿ ಕರ ವಸೂಲಿಗಾರ ಸಿದ್ದಣ್ಣ ಕವಾಲ್ದಾರ ಸೇವೆಯಿಂದ ವಜಾ ಮಾಡಲಾಗಿದೆ. ಕರ ವಸೂಲಿ ಹಣ ಬ್ಯಾಂಕಿಗೆ ಭರಿಸದೇ ದುರ್ನಡತೆ ತೋರಿದ್ದಕ್ಕಾಗಿ ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ. ಅದರಂತೆ ಕೋಳಕೂರು ಗ್ರಾಮ ಪಂಚಾಯತಿ ಪ್ರಭಾರ ಪಿಡಿಒ ಪವನ್ ಕುಮಾರ್ ಕುಲಕರ್ಣಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಈ ಮುಂಚೆ ಅಫಲಪುರ ತಾಲೂಕು ಪಂಚಾಯತ್ ಇಒ ಆಗಿದ್ದ ಸದ್ಯ ಜೇವರ್ಗಿ ತಾಲೂಕು ಪಂಚಾಯತ್ ಇಒ ಆಗಿರುವ ಅಬ್ದುಲ್ ನಬಿ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸಿಇಒ ಅವರು ಶಿಫಾರಸು ಪತ್ರ ಬರೆದಿದ್ದಾರೆ. ಅಬ್ದುಲ್ ನಬಿ ಅಫಜಲಪುರ ಇಒ ಆಗಿದ್ದಾಗ ಉಡಚಣ ಮತ್ತು ಕರಜಗಿ ಗ್ರಾಮ ಪಂಚಾಯತ್ಗಳಲ್ಲಿ ಸುಮಾರು 88 ಲಕ್ಷ ರೂಪಾಯಿ ಅವ್ಯವಹಾರ ಮಾಡಿದ ಆರೋಪ ಇದ್ದು, ಈಗಾಗಲೇ ಅಫಜಲಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇಲ್ನೋಟಕ್ಕೆ ಅನುದಾನ ದುರುಪಯೋಗ ಕಂಡು ಬಂದಿರುವ ಹಿನ್ನೆಲೆ ಶಿಸ್ತು ಕ್ರಮಕ್ಕೆ ಸಿಇಒ ಶಿಫಾರಸು ಮಾಡಿದ್ದಾರೆ.
ಒಟ್ಟಾರೆ ಅಕ್ರಮವಾಗಿ ಬಿಲ್‌ಗಳಿಗೆ ಮಂಜೂರಾತಿ ನೀಡಿರುವುದು, ದಾಖಲೆಗಳನ್ನು ನಿರ್ವಹಿಸದಿರುವುದು, ಕಾಮಗಾರಿ ನಡೆಸದೇ ಬಿಲ್‌ಗಳನ್ನು ಎತ್ತಿ ಹಾಕಿರುವ ಆರೋಪ ಇವರೆಲ್ಲರ ಮೇಲಿದೆ. ಅಲ್ಲದೇ ಸೂಕ್ತ ತನಿಖೆ ನಡೆಸಿ ಅಧಿಕಾರಿ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಿಇಒ ಕಚೇರಿ ಎದುರು ಶ್ರೀರಾಮ ಸೇನೆ ಕಾರ್ಯಕರ್ತರು ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದರು. ಇದೀಗ 9 ಜನರ ಜನ ಅಧಿಕಾರಿ ಸಿಬ್ಬಂದಿ ವಿರುದ್ಧ ಸಿಇಒ ಕ್ರಮ ಕೈಗೊಂಡಿದ್ದಾರೆ.
ವಕ್ಫ್ ಅಧಿಕಾರಿ ಹಜರತ್ ಅಲಿ ನದಾಫ್ ಅಮಾನತು: ಕಲಬುರಗಿ ಜಿಲ್ಲೆಯ ವಕ್ಫ್ ಅಧಿಕಾರಿ ಹಜರತ್ ಅಲಿ ನದಾಫ್ ಅವರನ್ನು ಸೇವೆಯಿಂದ ಅಮಾನತು ಮಾಡಿ ಕರ್ನಾಟಕ ರಾಜ್ಯ ವಕ್ಛ್ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದೇಶ ಹೊರಡಿಸಿದ್ದಾರೆ. ನಗರದ ಶೇಖರೋಜಾ ಬಡಾವಣೆಯ ಮೊಹಮ್ಮದ್ ಉಲತ್ ಜುನೇದಿ ಅವರ ವೈಯುಕ್ತಿಕ ಆಸ್ತಿಯನ್ನು ಕರ್ನಾಟಕ ರಾಜ್ಯ ವಕ್ಛ್ ಮಂಡಳಿಯಲ್ಲಿ ಅನಧಿಕೃತವಾಗಿ ನೊಂದಣಿ ಮಾಡಿದ್ದಾರೆ ಹಾಗೂ ಮೊಹ್ಮದ್ ಅಫಜಲುದ್ದೀನ್ ಎಂಬುವರಿಗೆ ಅನಧಿಕೃತವಾಗಿ ಕಟ್ಟಡ ನಿರ್ಮಿಸಲು ಅನುಮತಿ ನೀಡಿದ್ದಾರೆ ಎಂದು ರಾಜ್ಯ ಹಾಗೂ ಕೇಂದ್ರಿಯ ವಕ್ಫ್ ಪರಿಷತ್ತಿನಲ್ಲಿ ದೂರು ಸಲ್ಲಿಕೆಯಾಗಿತ್ತು.
ದೂರಿನ ಅನ್ವಯ ಈಗಾಗಲೇ ವಿಚಾರಣೆ ನಡೆಯುತ್ತಿದೆ. ಇದಲ್ಲದೇ ಈ ನಡುವೆ ಹಲವು ದೂರುಗಳು ಸಹ ಕೇಳಿ ಬಂದಿರುವ ಹಿನ್ನಲೆ ಪಾರದರ್ಶಕ ವಿಚಾರಣೆ ಕೈಗೊಳ್ಳಲು, ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಆದೇಶ ಪ್ರತಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:ಚಾಮರಾಜನರ.. ಹುಲಿ ಉಗುರು ಸಾಗಿಸುತ್ತಿದ್ದ ಇಬ್ಬರ ಬಂಧನ: ಅಪಘಾತದಲ್ಲಿ ನಾಲ್ವರಿಗೆ ತೀವ್ರ ಗಾಯ, ಇಬ್ಬರು ಆತ್ಮಹತ್ಯೆ