ಕಲಬುರಗಿ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಕೇಸ್‌ನಲ್ಲಿ ನಿನ್ನ ಹೆಸರು ಸೇರಿಸುವುದಾಗಿ ಆರ್‌ಟಿಒ ಖಜಾನೆ ಅಧಿಕಾರಿ ಆಫ್ತಾಬ್ ವಸಿಮ್ನನ್ನು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರ್‌ಟಿಒ ಕಚೇರಿ ಟೈಪಿಸ್ಟ್‌ನನ್ನು ಬಂಧಿಸಿದ್ದಾರೆ. ಅಲ್ಲದೇ ಪ್ರಕರಣದ ಪ್ರಮುಖ ಆರೋಪಿ ಹೆಡ್ ಕಾನ್ಸ್ಟೇಬಲ್ ಹಾಗೂ ಮತ್ತೋರ್ವ ವ್ಯಕ್ತಿಯ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.
ಕಲಬುರಗಿ ಆರ್‌ಟಿಒ ಕಚೇರಿಯ ಹಿರಿಯ ಬೆರಳಚ್ಚುಗಾರ ಪರ್ವೇಜ್ ಬಂಧಿತ ಆರೋಪಿ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆಮರೆಸಿಕೊಂಡಿರುವ ರಾಘವೇಂದ್ರ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಬಂದೇನವಾಜ್ ಹಾಗೂ ಆರ್‌ಟಿಒ ಕಚೇರಿಯಲ್ಲಿ ಬ್ರೋಕರ್ ದಂಧೆ ಮಾಡುತ್ತಿದ್ದ ಶಿವರಾಜ್ ಹೋಳ್ಕರ್ ಪತ್ತೆಗೆ ಶೋಧ ನಡೆಯುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ವಿವರ: ಕಲಬುರಗಿ ಆರ್‌ಟಿಒ ಕಚೇರಿಯ ಖಜಾನೆ ಅಧಿಕಾರಿ ಅಫ್ತಾಬ್ ವಸೀಮ್ ಎಂಬುವವರಿಗೆ ಹೆಡ್ಕಾನ್ಸ್ಟೇಬಲ್ ಬಂದೇನವಾಜ್ ಬೆದರಿಕೆ ಹಾಕಿದ್ದನಂತೆ. ನೀನು ಕ್ರಿಕೆಟ್ ಬೆಟ್ಟಿಂಗ್ ಆಡಿದ್ದಿಯಾ, 5 ಲಕ್ಷ ಹಣ ಕೊಡು, ಇಲ್ಲದಿದ್ರೆ ಐಪಿಎಲ್ ಬೆಟ್ಟಿಂಗ್ ಪ್ರಕರಣದಲ್ಲಿ ನಿನ್ನ ಹೆಸರು ತಳಕು ಹಾಕುತ್ತೇನೆಂದು ಹೆದರಿಸಿ 1.5 ಲಕ್ಷ ರೂ. ಹಣ ಪಡೆದಿದ್ದನು.
ನಂತರ ಮತ್ತೆ ಒಂದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಆದ್ರೆ ಅಷ್ಟೊಂದು ಹಣ ಕೊಡಲು ಆಗೋದಿಲ್ಲ ಎಂದಾಗ 75,000ರೂ. ಕೇಳಿದ್ದಾನೆ. ಕಡೆಗೆ 60 ಸಾವಿರ ರೂಪಾಯಿಗೆ ವ್ಯವಹಾರ ಕುದರಿಸಿದ್ದಾನೆ. ಇತ್ತ ಪರ್ವೇಜ್ ಹಾಗೂ ಶಿವರಾಜ್ ಹೋಳ್ಕರ್ ಕೂಡಾ ಹೆಡ್ಕಾನ್ಸ್ಟೇಬಲ್ ಬಂದೇನವಾಜ್ ಅವರಿಗೆ ಲಂಚ ಕೊಡುವಂತೆ ಒತ್ತಡ ಹಾಕಿದ್ದರು. ಇದರಿಂದ ಬೇಸತ್ತ ಆಫ್ತಾಬ್ ವಸಿಮ್ ಎಸಿಬಿ ಕಚೇರಿ ಮೊರೆಹೋಗಿದ್ದರು.
ಇದನ್ನೂ ಓದಿ: ನಟ ಸಂಚಾರಿ ವಿಜಯ್ ಮೊದಲ ವರ್ಷದ ಪುಣ್ಯತಿಥಿ; ರಂಗ ಗೀತೆಗಳ ಮೂಲಕ ನಮನ
ನಿನ್ನೆ (ಮಂಗಳವಾರ) ರಾತ್ರಿ ನಗರದ ಪ್ಲೋರಾ ಹೊಟೇಲ್ ಬಳಿ ಆಫ್ತಾಬ್ ವಸಿಮ್‌ರಿಂದ 60 ಸಾವಿರ ರೂಪಾಯಿ ಲಂಚ ಪಡೆಯಲು ಬಂದೇನವಾಜ್ ಪರವಾಗಿ ಆಗಮಿಸಿದ ಟೈಪಿಸ್ಟ್ ಪರ್ವೇಜ್‌ನನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ನಂತರ ಆತನಿಂದ ಬಂದೇನವಾಜ್ ಮತ್ತು ಶಿವರಾಜ್‌ಗೆ ಮೊಬೈಲ್ ಕರೆ ಮಾಡಿಸಿ ತಮ್ಮ ವಶಕ್ಕೆ ಪಡೆಯಬೇಕೆನ್ನುವಷ್ಟರಲ್ಲಿ ಇಬ್ಬರು ಚಾಲಾಕಿಗಳು ತಲೆಮರೆಸಿಕೊಂಡಿದ್ದಾರೆ. ಎಸಿಬಿ ಡಿಎಸ್ಪಿ ಸಂತೋಷ್ ಬನ್ನಟ್ಟಿ, ಇನ್ಸ್ಪೆಕ್ಟರ್ ಬಾಬಾಸಾಹೇಬ್ ಪಾಟೀಲ್, ಮಲ್ಲಿಕಾರ್ಜುನ ಯಾತನೂರ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.