ಕಲಬುರಗಿ : ಸಮಾಜದಲ್ಲಿ ಕೋಮು ಸೌಹಾರ್ದತೆ ಕದಡುವುದು ಸರಿಯಲ್ಲ. ಇದು ಹೀಗೆ ಮುಂದುವರೆದರೆ ದೇಶಕ್ಕೆ ಒಳ್ಳೆಯದಲ್ಲ ಎಂದು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಡುಪಿ ದೇವಸ್ಥಾನದಲ್ಲಿ ಮುಸ್ಲಿಂ ಸಮುದಾಯದ ವ್ಯಾಪಾರಸ್ಥರಿಗೆ ನಿರ್ಬಂಧ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದರು.
ಸರ್ಕಾರ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಮಾಡಿ ಯಾವುದೇ ಆದೇಶ ಹೊರಡಿಸಿಲ್ಲ. ಅದು ದೇವಸ್ಥಾನ ಮಂಡಳಿಯ ಆದೇಶ ಎಂಬುವುದು ನನ್ನ ಗಮನಕ್ಕೆ ಬಂದಿದೆ. ತಪ್ಪು ಗ್ರಹಿಕೆಯಿಂದ ಈ ರೀತಿ ಆಗಿದೆ. ಎಲ್ಲರೂ ಒಂದೇ ತಾಯಿಯ ಮಕ್ಕಳು. ಬೇಧ ಭಾವ ಮಾಡಬಾರದು. ಎಲ್ಲರೂ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳುವುದು ಉತ್ತಮ ಎಂದರು.
ಹಿಜಾಬ್ ವಿಚಾರ : ಕೋಟ್೯ ಆದೇಶ ಸ್ವಾಗತಾರ್ಹ : ಹಿಜಾಬ್ ವಿಚಾರಲ್ಲಿ ಹೈಕೋರ್ಟ್ ಆದೇಶವನ್ನು ತಪ್ಪುಗ್ರಹಿಕೆ ಮಾಡಲಾಗುತ್ತಿದೆ. ದೇಶದ ಕಾನೂನನ್ನು ಎಲ್ಲರೂ ಪಾಲನೆ ಮಾಡಬೇಕು. ಎಲ್ಲರೂ ಸಮವಸ್ತ್ರ ಧರಿಸಿಯೇ ಶಾಲಾ-ಕಾಲೇಜಿಗೆ ಆಗಮಿಸಬೇಕು. ಬುರ್ಖಾ ಮತ್ತು ಹಿಜಾಬ್ ಮನೆಯಿಂದ ಧರಿಸಿ ಬನ್ನಿ.
ಆದರೆ, ಕ್ಲಾಸ್ ರೂಮ್ಗೆ ಹೋಗುವಾಗ ಅದನ್ನ ತೆಗೆದು ಹೋಗಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿರುತ್ತಾರೆ. ಅಲ್ಲಿ ಅದನ್ನ ತೆಗೆದು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಬೇಕು ಎಂಬುದು ಕೋರ್ಟ್ ಆದೇಶ. ತರಗತಿ ಬಿಟ್ಟರೆ ಬೇರೆ ಕಡೆ ಹಿಜಾಬ್ ಧರಿಸಿ ಹೋಗೊದಕ್ಕೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಹೈಕೋರ್ಟ್ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು ಎಂದು ಹೇಳಿದ್ದಾರೆ.
ಓದಿ: ಶ್ರೀರಂಗನಾಥ ಸ್ವಾಮಿ ದೇವಾಲಯದ ಜಮೀನು ದುರುಪಯೋಗ ಪ್ರಕರಣ ಎಸ್ಐಟಿ ತನಿಖೆಗೆ