ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಮುನ್ನಹಳ್ಳಿ ಹಾಗೂ ಕಿಣ್ಣಿಸುಲ್ತಾನ್ ಗ್ರಾಮದಲ್ಲಿ ರಥದ ಸುತ್ತ ಆಳವಾದ ತಗ್ಗು ತೆಗೆದು ರಥೋತ್ಸವ ನಡೆಯದಂತೆ ಪೊಲೀಸರು ಮುಂಜಾಗ್ರತೆ ವಹಿಸಿದ್ದಾರೆ.
ಬಸವಣ್ಣನ ಸಮಕಾಲೀನ ವಚನಕಾರರಾಗಿದ್ದ ಮಸನ ಸಿದ್ದೇಶ್ವರ ಜಾತ್ರೆ ಮುನ್ನಹಳ್ಳಿ ಗ್ರಾಮದಲ್ಲಿ ನಡೆಯಬೇಕಿತ್ತು. ಅದರಂತೆ ಕಿಣ್ಣಿಸುಲ್ತಾನ್ ಗ್ರಾಮದಲ್ಲಿ ಬಸವೇಶ್ವರ ದೇವರ ಜಾತ್ರೆ ಬಸವ ಜಯಂತಿಯಂದು ನಡೆಯಬೇಕಿತ್ತು. ಕೊರೊನಾ ಜಾಗೃತಿ ನಡುವೆ ಗ್ರಾಮಸ್ಥರು ರಥೋತ್ಸವ ನಡೆಸುವ ಆತಂಕ ಇದ್ದ ಕಾರಣಕ್ಕೆ ಎರಡು ಗ್ರಾಮದಲ್ಲಿ ರಥದ ಸುತ್ತ ಗುಂಡಿ ತೆಗೆಯಲಾಗಿದೆ.
ಈ ಹಿಂದೆ ತಾಲೂಕಾಡಳಿತದ ಸೂಕ್ತ ಕ್ರಮದ ನಡುವೆಯೂ ಆಳಂದ ತಾಲೂಕಿನ ಭೂಸನೂರು, ಚಿತ್ತಾಪುರ ತಾಲೂಕಿನ ರಾವೂರು, ಸಾವಳಗಿಯಲ್ಲಿ ಗ್ರಾಮಸ್ಥರು ನಿಷೇಧಾಜ್ಞೆ ಉಲ್ಲಂಘಿಸಿ ರಾತ್ರೋರಾತ್ರಿ ರಥೋತ್ಸವ ನಡೆಸಿದ್ದರು. ನೂರಾರು ಜನ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಈ ಹಿನ್ನೆಲೆ ಇಡೀ ರಾವೂರ ಗ್ರಾಮವನ್ನೇ ಕ್ವಾರಂಟೈನ್ ಮಾಡಬೇಕಾಯಿತು. ಘಟನೆ ಸಂಬಂಧ ಹಲವು ಅಧಿಕಾರಿಗಳು ಸೇವೆಯಿಂದ ಅಮಾನತುಗೊಂಡಿದ್ದಾರೆ.