ಕಲಬುರಗಿ: ಭೀಮಾ ನದಿ ಪ್ರವಾಹದ ಅಬ್ಬರ ಮುಂದುವರೆದಿದ್ದು, ನದಿಯ ಪ್ರವಾಹದಲ್ಲಿ ರೈತನೋರ್ವ ಕೊಚ್ಚಿಹೋದ ಘಟನೆ ಜೇವರ್ಗಿ ತಾಲೂಕಿನ ಕೋಳಕೂರ ಗ್ರಾಮದಲ್ಲಿ ನಡೆದಿದೆ.
ಕೋಳಕೂರ ಗ್ರಾಮದ ಬಸಣ್ಣ ದೊಡ್ಡಮನಿ(55) ನೀರಿನಲ್ಲಿ ಕೊಚ್ಚಿಹೋದ ರೈತನಾಗಿದ್ದು, ಸಾಯಂಕಾಲ ನದಿಯಲ್ಲಿ ಜಾನುವಾರುಗಳಿಗೆ ನೀರು ಕುಡಿಸುವಾಗ ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದಾರೆಂದು ತಿಳಿದುಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು 11 ಜನರ ಎನ್ಡಿಆರ್ಎಫ್ ತಂಡ ದೌಡಾಯಿಸಿ ಶೋಧಕಾರ್ಯದಲ್ಲಿ ತೊಡಗಿದ್ದಾರೆ. ಮಧ್ಯರಾತ್ರಿಯಾದರೂ ಕೂಡಾ ಕತ್ತಲಿನಲ್ಲಿಯೇ ಟಾರ್ಚ್ ಸಹಾಯದಿಂದ ಶೋಧ ಕಾರ್ಯ ಮುಂದುವರೆದಿದ್ದು, ಪತ್ತೆಯಾಗದಿದ್ರೆ ಬೆಳಗ್ಗೆ ತೀವ್ರ ಶೋಧ ಕಾರ್ಯ ನಡೆಯಲಿದೆ.
ಸದ್ಯ ರೈತ ಬಸಣ್ಣನ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆತ ಸುರಕ್ಷಿತವಾಗಿ ಮರಳಲಿ ಎಂದು ಕಣ್ಣೀರು ಹಾಕ್ತಿದ್ದಾರೆ. ಇನ್ನು ಜೇವರ್ಗಿಯ ತಹಶೀಲ್ದಾರರು, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಜಿಲ್ಲಾ ಪಂಚಾಯತ್ ಸದಸ್ಯ ಶಿವರಾಜ ಪಾಟೀಲ್ ರದ್ದೆವಾಡಗಿ ಸ್ಥಳದಲ್ಲಿಯೇ ಮುಕ್ಕಾಂ ಹೂಡಿದ್ದಾರೆ. ಮಹಾರಾಷ್ಟ್ರದ ಉಜನಿ ಹಾಗೂ ವೀರಾ ಜಲಾಶಯದಿಂದ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಹರಿಬಿಟ್ಟ ಪರಿಣಾಮ ಭೀಮಾ ನದಿಯಲ್ಲಿ ಪ್ರವಾಹವುಂಟಾಗಿದೆ.