ಕಲಬುರಗಿ: ಬರ ಪರಿಹಾರ ಕಾಮಗಾರಿ ಕೈಗೊಳ್ಳಲು ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳಿಗೆ 600 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಇಂದು ಅಫ್ಜಲಪುರ ತಾಲೂಕಿನ ಗೊಬ್ಬೂರ (ಬಿ) ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೈಗೊಂಡ ಕೆರೆ ಶುಚಿತ್ವ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಗೂ 18 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇನ್ನೂ 12 ಕೋಟಿ ರೂ. ಮೊತ್ತ ಡಿಸಿ ಅವರ ಪಿಡಿ ಖಾತೆಯಲ್ಲಿದೆ. ಜಿಲ್ಲೆಯಲ್ಲಿನ ಜನ-ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಸರಬರಾಜಿಗೆ ಯಾವುದೇ ಅನುದಾನದ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಕಳೆದ 20 ದಿನದಲ್ಲಿ 15 ಜಿಲ್ಲೆಗಳಿಗೆ ಭೇಟಿ ನೀಡಿ ಬರ ಕಾಮಗಾರಿ ಪರಿಶೀಲಿಸಲಾಗಿದೆ. ಬರಗಾಲದ ಪರಿಸ್ಥಿತಿಯಲ್ಲಿ ಮೂರು ತಿಂಗಳು ಮಾತ್ರ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮತ್ತು ಗೋಶಾಲೆ ತೆರೆಯಬೇಕು ಎಂದು ಕೇಂದ್ರ ಸರ್ಕಾರದ ನಿರ್ಬಂಧವಿದೆ. ಆದರೆ ರಾಜ್ಯದಲ್ಲಿನ ಭೀಕರ ಬರಗಾಲ ಮತ್ತು ರೈತ ಸಮುದಾಯದ ಒಳಿತಿಗಾಗಿ ಈ ನಿರ್ಬಂಧಕ್ಕೆ ರಾಜ್ಯದಲ್ಲಿ ವಿನಾಯ್ತಿ ನೀಡಲಾಗಿದೆ. ಬರ ಇರುವವರೆಗೂ ಜನ-ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಸಮರ್ಪಕ ಮೇವು ಪೂರೈಸಲಾಗುವುದು ಎಂದರು.
ಗೊಬ್ಬೂರ (ಕೆ) ಗ್ರಾಮದಲ್ಲಿ ಟ್ಯಾಂಕರ್ ಮೂಲಕ ನೀರು:
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ಗೊಬ್ಬೂರ ಗ್ರಾಮದ ಕೆರೆಯಿಂದ ಗ್ರಾಮದಲ್ಲಿನ ಬಾವಿಗೆ ನೀರು ತರಲು ಪೈಪ್ಲೈನ್ ಕಾಮಗಾರಿಗೆ 1.5 ಕೋಟಿ ರೂ. ಅನುದಾನ ಒದಗಿಸಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಒಂದು ವಾರದಲ್ಲಿ ಗ್ರಾಮದ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದರು.
ಇದಕ್ಕೂ ಮುನ್ನ ಸಚಿವರು ಚೌಡಾಪುರ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿದರು.
ಕಚೇರಿಯಲ್ಲಿನ ಕಡತಗಳ ವಿಲೇವಾರಿಯನ್ನು ಸರಳೀಕರಣಗೊಳಿಸಲು ಮತ್ತು ಅವಶ್ಯವಿದ್ದಾಗ ಕಡತಗಳನ್ನು ಆನ್‍ಲೈನ್ ಮೂಲಕ ವೀಕ್ಷಿಸಲು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಅಳವಡಿಸಿಕೊಂಡಿರುವ ಇ-ಆಫೀಸ್ ಕಾರ್ಯವಿಧಾನಕ್ಕೆ ಕಂದಾಯ ಸಚಿವ ಆರ್.ವಿ ದೇಶಪಾಂಡೆ ಚಾಲನೆ ನೀಡಿದರು.
ಛತ್ತಿಸ್‍ಘಡ ರಾಜ್ಯದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರ್ ಬಾಂಬ್ ದಾಳಿಯಲ್ಲಿ ಹುತಾತ್ಮರಾದ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮರಗುತ್ತಿ ಗ್ರಾಮದ ಸಿ.ಆರ್.ಪಿ.ಎಫ್. ಯೋಧ ಎ.ಎಸ್.ಐ. ಮಹಾದೇವ ಪೊಲೀಸ್ ಪಾಟೀಲ ಅವರ ಕುಟುಂಬಕ್ಕೆ ಪರಿಹಾರ ಹಣ ನೀಡಲಾಯಿತು. ರಾಜ್ಯ ಸರ್ಕಾರದಿಂದ ಪರಿಹಾರದ ಮೊತ್ತವಾಗಿ 25 ಲಕ್ಷ ರೂ.ಗಳ ಚೆಕ್‍ನ್ನು ಮಹಾದೇವ ಅವರ ಪುತ್ರ ಸಂದೀಪ ಪಾಟೀಲರಿಗೆ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಚಿವ ಆರ್.ವಿ. ದೇಶಪಾಂಡೆ ಹಾಗೂ ಸಮಾಜ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಿತರಿಸಿದರು.