ಸೇಡಂ: ತಾಲೂಕಿನ 27 ಗ್ರಾಮ ಪಂಚಾಯಿತಿ ವ್ಯಾಪ್ತಿಯ 194 ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದೆ.
ಕೋವಿಡ್ ಮುಂಜಾಗ್ರತೆಯೊಂದಿಗೆ ಮತದಾನ ನಡೆಯುತ್ತಿದೆ. ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಗಳು ಕೂಡ ಮತಗಟ್ಟೆ ಕೇಂದ್ರಗಳಲ್ಲಿ ಮುಂಜಾಗ್ರತೆ ವಹಿಸಿದ್ದಾರೆ. ಮತಗಟ್ಟೆ ಕೇಂದ್ರಕ್ಕೆ ಬರುವ ಮತದಾರರಿಗೆ ಸ್ಕ್ರೀನಿಂಗ್ ಮಾಡಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಶಾಂತಿಯುತ ಮತದಾನ ನಡೆಯಲು ವ್ಯಾಪಕ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಬೆಳಗ್ಗೆ 11 ಗಂಟೆಯವರೆಗೆ ಶೇ. 23.31 ಮತದಾನವಾಗಿದೆ ಎಂದು ತಹಶೀಲ್ದಾರ್ ಮಲ್ಲೇಶಪ್ಪ ತಿಳಿಸಿದ್ದಾರೆ. ತಾಲೂಕಿನ ಊಡಗಿ ಗ್ರಾಮದ ಬೂತ್ ನಂ.1ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ವಕ್ತಾರರು ಹಾಗೂ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ, ಪತ್ನಿ ಡಾ. ಭಾಗ್ಯಶ್ರೀ ಪಾಟೀಲ ಮತ್ತು ಸಹೋದರರಾದ ಹಿರಿಯ ಕಾಂಗ್ರೆಸ್ ಮುಖಂಡ ಬಸವರಾಜ ಪಾಟೀಲ ಊಡಗಿ ಅವರ ಜೊತೆ ಆಗಮಿಸಿ ಮತದಾನ ಮಾಡಿದ್ದಾರೆ.
ಕುಕ್ಕುಂದಾ ಗ್ರಾಮದ ಮತಗಟ್ಟೆ ಕೇಂದ್ರದಲ್ಲಿ ಶ್ರೀ ಕೊತ್ತಲ ಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಸದಾಶಿವ ಸ್ವಾಮಿಗಳು ಮತ ಚಲಾಯಿಸಿದ್ದಾರೆ.