ರಾಣೆಬೆನ್ನೂರು: ಬಾರ್ ಮಾಲೀಕನೊಬ್ಬ ತನ್ನ ಹೆಂಡತಿಯನ್ನು ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ತಾಲೂಕಿನ ಮಾರುತಿ ನಗರದಲ್ಲಿ ನಡೆದಿದೆ.
ನೇತ್ರಾವತಿ ನವೀನ ಹುಲಗಮ್ಮನವರು(30) ಕೊಲೆಯಾದ ಮಹಿಳೆ. ರಾಣೆಬೆನ್ನೂರಿನ ಚಿನ್ಮಯಿ ಬಾರ್ ಮಾಲೀಕರಾದ ನವೀನ ಹುಲಗಮ್ಮನವರ ಎಂಬ ವ್ಯಕ್ತಿ ತನ್ನ ಪತ್ನಿಯನ್ನು ಕೊಲೆ ಮಾಡಿ ರಾಣೆಬೆನ್ನೂರು ಶಹರ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ.
ಇಂದು ಬೆಳಗ್ಗೆ 10 ಗಂಟೆಗೆ ವೈಯಕ್ತಿಕ ವಿಷಯದ ಹಿನ್ನೆಲೆ ಬಾಡಿಗೆ ಮನೆಯಲ್ಲಿ ಗಂಡ-ಹೆಂಡತಿ ನಡುವೆ ಜಗಳ ನಡೆದಿದೆ. ಇದರಿಂದ ಕೋಪಗೊಂಡ ನವೀನ ಹೆಂಡತಿಯನ್ನು ಕುಡಗೋಲಿನಿಂದ ಕುತ್ತಿಗೆಗೆ ಹೊಡೆದಿದ್ದಾನೆ. ಇದರಿಂದ ನೇತ್ರಾವತಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿ ಸಾವನ್ನಪ್ಪಿದ್ದಾಳೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಅನೈತಿಕ ಸಂಬಂಧಕ್ಕೆ ನಡೆಯಿತಾ ಕೊಲೆ?: ನವೀನ ಹಾಗೂ ನೇತ್ರಾವತಿ ಕಳೆದ ಹತ್ತು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಮುದ್ದಾದ ಎರಡು ಹೆಣ್ಣು ಮಕ್ಕಳಿವೆ. ಇತ್ತೀಚಿಗೆ ಅನೈತಿಕ ಸಂಬಂಧದ ಹಿನ್ನೆಲೆ ಸಂಸಾರದಲ್ಲಿ ಬಿರುಕು ಮೂಡಿತ್ತು ಎನ್ನಲಾಗಿದೆ. ಅಲ್ಲದೇ ಪೊಲೀಸರು ಒಂದು ಬಾರಿ ರಾಜಿ ಪಂಚಾಯಿತಿ ಮಾಡಲಾಗಿತ್ತು. ಆದರೆ ಇಂದು ಜಗಳ ವಿಕೋಪಕ್ಕೆ ಹೋದಾಗ ನವೀನ ಹೆಂಡತಿಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.