ಹಾವೇರಿ: ನಾನು ಚಿತ್ರರಂಗದಲ್ಲಿದ್ದಾಗ ಈ ರೀತಿ ಡ್ರಗ್ಸ್ ಮಾಫಿಯಾ ಇರಲಿಲ್ಲ. ಸಣ್ಣ ಸಣ್ಣ ತಪ್ಪಿಗೂ ಸಹ ಪಶ್ಚಾತಾಪ ಪಡುತ್ತಿದ್ದೆವು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಚಿತ್ರರಂಗಕ್ಕೆ ಡ್ರಗ್ಸ್ ಕಳಂಕ ತಗುಲಿರುವುದು ದುರದೃಷ್ಟಕರ. ಡ್ರಗ್ಸ್ ಮಾಫಿಯಾ ಎಲ್ಲಾ ರಂಗದಲ್ಲಿ ಇದೆ. ಆದರೆ ಚಿತ್ರರಂಗದಲ್ಲಿ ಒಂದಿಬ್ಬರು ತಪ್ಪು ಮಾಡಿದರೆ ಇಡೀ ಚಿತ್ರರಂಗವನ್ನ ದೋಷಿಸುವುದು ಸರಿಯಲ್ಲ. ಚಿತ್ರರಂಗದಲ್ಲಿ ಸಾಕಷ್ಟು ಜನ ಒಳ್ಳೆಯವರಿದ್ದಾರೆ. ಹಾಲು ತುಂಬಿದ ಕೊಡಕ್ಕೆ ಸ್ವಲ್ಪ ಉಪ್ಪು ಹಾಕಿದಂತೆ ಕೆಲವೇ ಕೆಲವರಿಂದ ಚಿತ್ರರಂಗದ ಹೆಸರು ಹಾಳಾಗುತ್ತಿದೆ. ಇದಕ್ಕಾಗಿ ಇಡೀ ಚಿತ್ರರಂಗವನ್ನ ದೋಷಿಸುವುದು ಸರಿಯಲ್ಲ.
ಕೆಲ ರೈತರು ಗಾಂಜಾ ಬೆಳೆದರೆ ಇಡೀ ರೈತಕುಲವನ್ನ ದೂಷಿಸುವುದು ಸರಿಯಲ್ಲ. ಅನ್ನ ನೀಡುವ ರೈತ ಗಾಂಜಾ ಬೆಳೆಯಬಾರದು ಎಂದರು. ಡಿಸಿಎಂ ಲಕ್ಷ್ಮಣ ಸವದಿ ಕುರಿತಂತೆ ಜೆಡಿಎಸ್ ಮುಖಂಡ ಸಾ.ರಾ.ಮಹೇಶ್ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅವರು ತನಿಖೆಯಲ್ಲಿ ನಿರಪರಾಧಿಯಾಗಿ ಬಂದಿದ್ದಾರೆ ಎಂದರು.